

ಹುನಗುಂದ: ಲಿಂಗಾಯತ ಧರ್ಮ ಜನ್ಮತಾಳಿ ಒಂಬತ್ತು ನೂರು ವರ್ಷವಾದರೂ ಸ್ವತಂತ್ರ ಧರ್ಮದ ಮಾನ್ಯತೆ ದೊರೆಯದಿರುವುದು ದುರಂತ ಎಂದು ಬೆಂಗಳೂರಿನ ಬಸವಗಂಗೋತ್ರಿ ಚೆನ್ನಬಸವೇಶ್ವರ ಜ್ಞಾನಪೀಠದ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ (ಕೂಡಲಸಂಗಮ ಕ್ರಾಸ್ ಹತ್ತಿರ) ಹೂವನೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಭಿಮಾನ ಶರಣ ಮೇಳದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟದ ಮುಂದಿನ ನಡೆ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾತೆ ಮಹಾದೇವಿ ಅವರು ಲಿಂಗಾಯಿತ ಧರ್ಮ ಒಂದು ಸ್ವತಂತ್ರ ಧರ್ಮ ಎಂದು ಮೊಟ್ಟಮೊದಲ ಬಾರಿಗೆ ಘೋಷಿಸಿದರು. ಕೆಲವರು ವೈಯಕ್ತಿಕ ಸ್ವಾರ್ಥಕ್ಕಾಗಿ ತಾವು ಬೆಳೆಯಬೇಕು ಎಂಬ ಆಸೆಯಿಂದ ಲಿಂಗಾಯತ ಧರ್ಮದ ಹೋರಾಟದ ಹಾದಿ ತಪ್ಪಿಸಿದ್ದಾರೆ. ನಾವೆಲ್ಲರೂ ಒಟ್ಟಾಗಿ ಹೋರಾಡಿ ಲಿಂಗಾಯತ ಧರ್ಮಕ್ಕೆ ಸ್ವಾತಂತ್ರ್ಯ ಧರ್ಮದ ಮಾನ್ಯತೆ ಪಡೆಯೋಣ ಎಂದರು.
ಬೀದರ ಬಸವಮಂಟಪದ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕ ಮಹಿಳಾ ಗಣ ರಾಷ್ಟ್ರೀಯ ಅಧ್ಯಕ್ಷೆ ಸತ್ಯಾದೇವಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರಕಿಸಿ ಕೊಡಲು ಸ್ವಾಮೀಜಿ ಒಬ್ಬರೇ ಜವಾಬ್ದಾರರಲ್ಲ. ಪ್ರತಿಯೊಬ್ಬರ ತಲೆಯ ಮೇಲೆ ಧರ್ಮದ ಹೊರೆ ಇದೆ. ಎಲ್ಲರೂ ನಾನು ಲಿಂಗಾಯತ ಎಂದು ಎದೆ ತಟ್ಟಿ ಹೇಳಿಕೊಂಡು ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ಹೋರಾಟ ಮಾಡಿದಾಗ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ಸಾಧ್ಯ ಎಂದರು.
ಮಂಡ್ಯದ ಸಾಲಳ್ಳಿಯ ಓಂಕಾರ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಲಿಂಗಾಯತ ಸಮುದಾಯ ಪ್ರಬಲವಾಗಿದೆ. ನಮ್ಮ ಧರ್ಮಗ್ರಂಥ ವಚನ ಸಾಹಿತ್ಯ ಮಾನವೀಯ ಮೌಲ್ಯ ಒಳಗೊಂಡಿದೆ. ಸಂವಿಧಾನಾತ್ಮಕವಾಗಿ ಲಿಂಗಾಯತ ಧರ್ಮದ ಮಾನ್ಯತೆ ಪಡೆಯೋಣ ಎಂದರು.
ಸಿಂದಗಿ ಪ್ರಭುಲಿಂಗ ಮಹಾಮಠದ ಸ್ವಾಮೀಜಿ, ಬೀದರ ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಅತಿವಾಳ, ಬೆಂಡಿಗೇರಿ, ಪತ್ರಕರ್ತ ಶಿವಕುಮಾರ, ರವಿಕಾಂತ ಬಿರಾದಾರ, ಬಸನಗೌಡ, ಶರಣ ಪ್ರಸಾದ, ಬಾಣೂರು ಚನ್ನಪ್ಪ ಅಭಿಪ್ರಾಯ ಹಂಚಿಕೊಂಡರು.