

ನರಗುಂದ: ಬಂಡಾಯದ ನಾಡು ನರಗುಂದಕ್ಕೆ ನೂತನ ರೈಲ್ವೆ ಮಾರ್ಗದ ಅವಶ್ಯ ಇದೆ. ಈ ಭಾಗದ ವಾಣಿಜ್ಯ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ವಿವಿಧ ಪ್ರವಾಸೋದ್ಯಮಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಘಟನಾತ್ಮಕ ನಿರಂತರ ಹೋರಾಟಕ್ಕೆ ಅಣಿಯಾಗಬೇಕು ಎಂದು ಡಾ.ಬಿ.ಎಂ.ಜಾಬಣ್ಣವರ ಹೇಳಿದರು. ಕುಷ್ಟಗಿಯಿಂದ ನರಗುಂದ ಮಾರ್ಗವಾಗಿ ಘಟಪ್ರಭಾ ವರೆಗೆ ನೂತನ ರೈಲು ಮಾರ್ಗ ಪ್ರಾರಂಭಿಸುವ ಕುರಿತು ಪಟ್ಟಣದ ಪಂಚಗ್ರಹ ಗುಡ್ಡದ ಹಿರೇಮಠದಲ್ಲಿ ದಿ.ಎಫ್.ಎಂ. ಹಸಬಿ ಹಾಗೂ ಜಗನ್ನಾಥರಾವ್ ಜೋಶಿ ರೈಲ್ವೆ ಹೋರಾಟ ಸಮಿತಿ ಸದಸ್ಯರು ಇತ್ತೀಚೆಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಮಿತಿ ಸಂಚಾಲಕ ಚನ್ನು ನಂದಿ ಮಾತನಾಡಿ, ಏಳು ದಶಕ ಕಳೆದರೂ ರೈಲ್ವೆ ಸೇವೆ ಪ್ರಾರಂಭಗೊಳ್ಳದಿರುವುದು ನೋವಿನ ಸಂಗತಿ. ಕೇಂದ್ರ ಇನ್ನಾದರೂ ಈ ಮನವಿಗೆ ಸ್ಪಂದಿಸಲಿ ಎಂದು ತಿಳಿಸಿದರು. ಚನ್ನಬಸಪ್ಪ ಕಂಠಿ, ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ವರ್ತಕ ರಾಘವೇಂದ್ರ ಗುಜಮಾಗಡಿ, ಜಿ.ಆರ್. ಕದಂ, ಶಿವಯೋಗಿ ಬೆಂಡಿಗೇರಿ, ಶಿವಪುತ್ರಪ್ಪ, ಮಾತನಾಡಿದರು. ಲೀಲಕ್ಕ ಹಸಬಿ, ಮಾಜಿ ಸೈನಿಕರ ಸಂಘದ ಶೆಟ್ಟಿ, ಪರಿಸರ ಪ್ರೇಮಿ ಜಗದೀಶ ಗೊಂಡಬಾಳ, ಬಸಣ್ಣ ಗೊವೇಶ್ವರ, ಬಸವರಾಜ ತಾವರೆ, ಡಾ.ಮುತ್ತು ಸುರಕೋಡ, ಶಿವರಾಜ್ ಕಲ್ಲಾಪೂರ, ಉಪಸ್ಥಿತರಿದ್ದರು.