ವಿಧಾನಸಭೆ ಚುನಾವಣೆಗೆ ಸನ್ನದ್ಧರಾಗೋಣ

HN-21-2
Published on

ವಿಜಯಪುರ: ಮುಂಬರುವ ವಿಧಾನಸಭೆ ಚುನಾವಣೆಗೆ ಎಲ್ಲರೂ ಸನ್ನದ್ಧರಾಗೋಣ. ಆ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿನ ಐಶ್ವರ್ಯ ನಗರದಲ್ಲಿರುವ ಸಾಯಿ ವಿಹಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 130 ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ. ಜಿಲ್ಲೆಯಲ್ಲಿ 8 ವಿಧಾನ ಸಭೆ ಕ್ಷೇತ್ರದಲ್ಲಿ 6 ರಿಂದ 7 ಸೀಟುಗಳನ್ನು ಗೆಲ್ಲುವಂತೆ ನೋಡಿಕೊಳ್ಳಲು ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕಿದೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಮುಂದುವರಿದಿದ್ದು, ಹಿಂದುತ್ವದ ಅಲೆಯಿಂದಾಗಿ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗದ್ದುಗೆ ಏರಿದೆ. ಇದು ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗಿದೆ. ವರಿಷ್ಠರು ಕೂಡ ಶ್ಲಾಘಿಸಿದ್ದು, ಮುಂದಿನ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮವಹಿಸಬೇಕೆಂದು ಸಲಹೆ ನೀಡಿದರು.

ಬಿಜೆಪಿಯ ಬತ್ತಳಿಕೆಯಲ್ಲಿ ಇನ್ನಷ್ಟು ಬ್ರಹ್ಮಾಸ್ತ್ರಗಳಿದ್ದು, ಈಗಾಗಲೇ ಬಳ್ಳಾರಿಯಲ್ಲಿ ನಡೆದ ಎಸ್‌ಟಿ ಸಮಾವೇಶ ಅದಕ್ಕೆ ಪುಷ್ಠಿ ನೀಡಿದಂತಾಗಿದೆ. ಅಲ್ಲದೆ, ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಹೆಚ್ಚಳ, ಮರಾಠ ಸಮಾಜಕ್ಕೆ ನಿಗಮ ರಚನೆ, ತಳವಾರ ಸಮುದಾಯಕ್ಕೆ ಎಸ್‌ಟಿ ಮೀಸಲು ನೀಡಲಾಗಿದೆ. ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇನ್ನಷ್ಟು ಐತಿಹಾಸಿಕ ನಿರ್ಣಯಗಳನ್ನು ಸರ್ಕಾರ ಕೈಗೊಳ್ಳುವ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿ ಹೊರ ಹೊಮ್ಮಿದ್ದಾರೆ. ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಮೋದಿ ಅವರ ಕಾರ್ಯವೈಖರಿ ಶ್ಲಾಘಿಸಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ನ ಲೆಕ್ಕಾಚಾರ ಬದಲಾಗಿದೆ. ಕಾಂಗ್ರೆಸ್‌ನ ನಾಯಕರು ಹತಾಶೆಗೊಂಡಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಕೇಂದ್ರ ಸರ್ಕಾರ ಶೇ.10 ರಷ್ಟು ಮೀಸಲಾತಿ ನೀಡಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿರುವುದು ಸರಿಯಲ್ಲ ಎಂದು ಹೇಳಿದರು.

ಶಾಸಕ ರಮೇಶ ಭೂಸನೂರ ಮಾತನಾಡಿ, ಬಿಜೆಪಿ ಬಲವರ್ಧನೆಯ ಹಾದಿಯಲ್ಲಿ ಸಾಗುತ್ತಿದೆ. ವರಿಷ್ಠರ ಹೆಜ್ಜೆಯಂತೆ ಕಾರ್ಯಕರ್ತರು ಹೆಜ್ಜೆ ಇಡಬೇಕಾಗುತ್ತದೆ. ಕಳೆದ ವಿಧಾನಸಭೆಯಲ್ಲಿ ಅಪಪ್ರಚಾರದಿಂದಾಗಿ ಸೋಲು ಅನುಭವಿಸಿದಂತಾಯಿತು. ನಂತರ ನಡೆದ ಉಪ ಚುನಾವಣೆಯಲ್ಲಿ ಮತದಾರರು ಕೈ ಹಿಡಿದಿದ್ದಾರೆ ಎನ್ನುವ ಮೂಲಕ ಸೋಲಿನ ಕಹಿ ಅನುಭವ ಮೆಲುಕು ಹಾಕಿದರು.

ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, 1951ರಿಂದ ಈ ವರೆಗೆ ಬಿಜೆಪಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ತತ್ವ, ಸಿದ್ಧಾಂತಗಳನ್ನು ಇಟ್ಟುಕೊಂಡು ಸಾಗುತ್ತಿದೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮೊದಲು ಎನ್ನುವ ತತ್ವ ಪರಿಪಾಲನೆ ಅಗತ್ಯ. ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಅದಕ್ಕಾಗಿ ಎಲ್ಲರೂ ಬದ್ಧರಾಗಿ ಕೆಲಸ ಮಾಡಬೇಕಾಗುತ್ತದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಕೂಚಬಾಳ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಜುಗೌಡ ಪಾಟೀಲ, ಪ್ರಕಾಶ ಅಕ್ಕಲಕೋಟ, ಉಮೇಶ ಕಾರಜೋಳ, ವಿವೇಕಾನಂದ ಡಬ್ಬಿ, ಶಿವರುದ್ರ ಬಾಗಲಕೋಟ, ಜಯಪ್ರಕಾಶ, ಮಲ್ಲಮ್ಮ ಜೋಗೂರ, ಮಲ್ಲಿಕಾರ್ಜುನ ಜೋಗೂರ ಮತ್ತಿತರರಿದ್ದರು.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು
ಎಸ್‌ಎಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿರುವ ಹಿಂದು ಶಬ್ದ ಅಶ್ಲೀಲ ಮತ್ತು ಅಸಹ್ಯ ಎಂಬ ಪದಬಳಕೆ ಮಾಡಿರುವುದಕ್ಕೆ ಖಂಡನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net