

ತುಮಕೂರು: ಸ್ವಚ್ಛ ನಗರಗಳ ಪೈಕಿ ತುಮಕುರು ಮೊದಲ ಸ್ಥಾನ ಪಡೆಯಲು ಪಾಲಿಕೆ ಸಿಬ್ಬಂದಿ ಜತೆ ನಗರದ ನಾಗರಿಕರು ಸಹಕಾರ ನೀಡಬೇಕು ಎಂದು ಮೇಯರ್ ಫರೀದಾಬೇಗಂ ಮನವಿ ಮಾಡಿದರು.
ಸ್ವಚ್ಛ ಸರ್ವೇಕ್ಷಣ್- 2021 ಅಂಗವಾಗಿ ನಗರದ ಬಿಜಿಎಸ್ ವೃತ್ತದಿಂದ ಭಾನುವಾರ ಆರಂಭವಾದ ‘ಸೈಕ್ಲಾಥಾನ್’ಗೆ ಚಾಲನೆ ನೀಡಿ ಮಾತನಾಡಿದ ಅವರು, ಮೈಸೂರು ಮಾದರಿಯಲ್ಲಿ ತುಮಕೂರು ಕೂಡ ಸ್ವಚ್ಛನಗರವಾಗಬೇಕು ಎಂಬ ನಿಟ್ಟಿನಲ್ಲಿ ಪಾಲಿಕೆ ವಿಶೇಷ ಆಸಕ್ತಿವಹಿಸಿ ಕೆಲಸ ಮಾಡುತ್ತಿದೆ ಎಂದರು.
ಸ್ವಚ್ಛತೆಗೆ ಸಂಬಂಧಿಸಿದಂತೆ ಪಾಲಿಕೆ ನೂತನವಾಗಿ ಬಿಡುಗಡೆ ಮಾಡಿರುವ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ಅದರ ಮೂಲಕ ಪ್ರತಿನಿತ್ಯ ಸಲಹೆ-ಸೂಚನೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ‘ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 2000 ಕೋಟಿ ರೂ. ಅನುದಾನ ಬಂದಿದ್ದು ನಗರದೆಲ್ಲೆಡೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ, ಕರೊನಾ ಹಿನ್ನೆಲೆಯಲ್ಲಿ 9 ತಿಂಗಳಿಂದ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದ್ದು ವೇಗ ನೀಡಲಾಗಿದೆ ಎಂದು ತಿಳಿಸಿದರು.
ನಗರದ 35 ವಾರ್ಡ್‌ಗಳಲ್ಲಿ ದಿನನಿತ್ಯ ಪಾಲಿಕೆಯ ಕಾರ್ಪೋರೇಟರ್‌ಗಳು ಸೇರಿ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು, ಕುಡಿಯುವ ನೀರು, ರಸ್ತೆಗಳು, ಚರಂಡಿ ವ್ಯವಸ್ಥೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ರೋಗ ಮುಕ್ತ ನಗರವನ್ನಾಗಿ ಮಾಡಲು ಪಾಲಿಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಉಪಮೇಯರ್ ಶಶಿಕಲಾ, ಕೆಎಸ್‌ಆರ್‌ಪಿ ಘಟಕದ ಕಮಾಂಡೆಂಟ್ ಯುವ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್, ರಮೇಶ್, ಶ್ರೀನಿವಾಸ್, ಧರಣೇಂದ್ರಕುಮಾರ್, ಪರಿಸರ ಇಂಜಿನಿಯರ್ ಕೃಷ್ಣಮೂರ್ತಿ, ನಿಖಿತಾ ಭಾಗವಹಿಸಿದ್ದರು.
ಜಾಥಾ ಸಾಗಿದ್ದೆಲ್ಲೆಲ್ಲಿ?: ನಗರದ ಟೌನ್‌ಹಾಲ್ ವೃತ್ತದಿಂದ ಆರಂಭವಾದ ಸೈಕಲ್ ಜಾಥಾ ಅಶೋಕ ರಸ್ತೆ, ಕೋತಿತೋಪು, ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ಮೂಲಕ ಸಂಚರಿಸಿ ಎಸ್.ಎಸ್.ಪುರಂನ ಕೆಂಪಣ್ಣ ಅಂಗಡಿ ಸರ್ಕಲ್‌ನಲ್ಲಿ ಮುಕ್ತಾಯಗೊಂಡಿತು.
ಸ್ವಚ್ಛತೆಗೆ ಸಹಕರಿಸೋಣ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಸರ್ವೇಕ್ಷಣ್‌ಗೆ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಬೇಕಿದೆ. ಸಮೀಕ್ಷೆಯಲ್ಲಿ 48ನೇ ಸ್ಥಾನದಲ್ಲಿದ್ದ ತುಮಕೂರು ಈಗ ಎರಡನೇ ಸ್ಥಾನಕ್ಕೆ ಬಂದಿರುವುದು ಮಾದರಿ ಎಂದು ಪಾಲಿಕೆ ಆಯುಕ್ತೆ ರೇಣುಕಾ ಹೇಳಿದರು.
ಮುಂಬರುವ ದಿನಗಳಲ್ಲಿ ಮೇಯರ್ ನಿರೀಕ್ಷೆಗೆ ಅನುಗುಣವಾಗಿ ಮೊದಲ ಸ್ಥಾನಕ್ಕೆ ತರುವುದರ ಜತೆಗೆ ಹಸಿರು ನಗರವನ್ನಾಗಿ ಮಾಡೋಣ, ಪ್ರತಿ ಕುಟುಂಬದವರು ಮನೆಗೆ ಒಂದು ಸಸಿ ನೆಡುವ ಮೂಲಕ ನಗರವನ್ನು ಹಸಿರುನ್ನಾಗಿಸೋಣ, ನಗರದ ಸ್ವಚ್ಛತೆಗೆ ಆದ್ಯತೆ ನೀಡೋಣ, ಇದಕ್ಕೆ ಮಹಾನಗರ ಪಾಲಿಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.