ಸಾಂಸ್ಕೃತಿಕ ಕಲೆಗಳು ವಿನಿಮಯವಾಗಲಿ

Published on

ಬಳ್ಳಾರಿ ; ಶೈಕ್ಷಣಿಕ ರಂಗದಲ್ಲಿ ರಾಜ್ಯದೆಲ್ಲೆಡೆ ಇರುವ ವೈವಿಧ್ಯಮಯ ಸಾಂಸ್ಕೃತಿಕ ಕಲೆಗಳು ಯುವ ಸಮುದಾಯಕ್ಕೆ ವಿನಿಮಯವಾಗಬೇಕು ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.

ಇಲ್ಲಿನ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ್- ನೆಹರು ಯುವ ಕೇಂದ್ರ ಹಾಗೂ ವಿದ್ಯಾರ್ಥಿ ಕಲ್ಯಾಣ ಘಟಕ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಬಳ್ಳಾರಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಡೆಯಲಿರುವ 5 ದಿನಗಳ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯವು ಹಲವಾರು ವೈವಿಧ್ಯಮಯ ಕಲೆಗಳ ತವರೂರಾಗಿದೆ. ನಮ್ಮಲ್ಲಿ ಪ್ರದೇಶವಾರು ವಿಭಿನ್ನ ಸಾಂಸ್ಕೃತಿಕ ಪರಂಪರೆಗಳನ್ನು ಕಾಣಬಹುದಾಗಿದ್ದು, ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ವರದಾನವಾಗಿವೆ ಎಂದರು. ದೇಶವು 2047ರ ಹೊತ್ತಿಗೆ ಶೇ.80 ಯುವಕರನ್ನು ಹೊಂದಲಿದೆ. ಯುವಕರು ತಮ್ಮಲ್ಲಿರುವ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಭೆಗಳನ್ನು ವಿನಿಮಯ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಿವಿ ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿ, ಉತ್ತರ ಕರ್ನಾಟಕವು ಜನಪದ ಕಲೆಗಳ ಬೀಡಾಗಿದೆ. ನಮ್ಮಲ್ಲಿಯ ದೇಸಿ ಕಲೆಗಳ ಕುರಿತು ಇಂದಿನ ಯುವಕರಿಗೆ ಅರಿವೇ ಇಲ್ಲ. ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಯುವಕರ ಮೇಲಿದೆ. ಶಿಕ್ಷಣದ ಜತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ನಾವು ರೂಢಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಡಾ.ಎಚ್.ಸಿ ರಾಘವೇಂದ್ರ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೌಶಲ್ಯ ಆಧಾರಿತ ಶಿಕ್ಷಣ ಮಹತ್ವಪೂರ್ಣವಾಗಿದೆ. ಜನಪದ ಕಲೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿನಿಮಯ ಕಾರ್ಯಕ್ರಮದಲ್ಲಿ ಬಳ್ಳಾರಿ ವಿವಿಯಿಂದ 27 ವಿದ್ಯಾರ್ಥಿಗಳನ್ನು ತುಮಕೂರಿಗೆ ಹಾಗೂ ತುಮಕೂರು ವಿವಿಯಿಂದ 25 ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net