

ಕೋಲಾರ: ಶ್ರೀಯೋಗಿನಾರೇಯಣ ಯತೀಂದ್ರರ 299ನೇ ಜಯಂತಿ ಅಂಗವಾಗಿ ಶುಕ್ರವಾರ ನಗರದ ಟೇಕಲ್ ವೃತ್ತದಲ್ಲಿ ಪಲ್ಲಕ್ಕಿಗಳ ಅದ್ದೂರಿ ಮೆರವಣಿಗೆಗೆ ಸಂಸದ ಎಂ.ಮಲ್ಲೇಶ್ಬಾಬು, ಮಾಜಿ ಸಂಸದ ಎಸ್.ಮುನಿಸ್ವಾಮಿ, ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಚಾಲನೆ ನೀಡಿದರು.
ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ತಾತಯ್ಯರ ಕಾಲಜ್ಞಾನದಲ್ಲಿ ಹೇಳಿರುವಂತೆಯೇ ಎಲ್ಲವೂ ನಡೆಯುತ್ತಿದ್ದು, ಒಳ್ಳೆಯ ಕೆಲಸಕ್ಕೆ ಒಳ್ಳೆಯ ಜನರು, ವ್ಯಕ್ತಿತ್ವ ಹಾಗೂ ಸರ್ಕಾರ ಅಗತ್ಯ, ಸಮುದಾಯದವರು ಸಂಟನೆಗೊಳ್ಳುವ ಮೂಲಕ ಪ್ರಾತಿನಿಧ್ಯವಹಿಸಬೇಕು ಎಂದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೈವಾರ ತಾತಯ್ಯರು ಜೀವ ಸಮಾಧಿ ಆಗಿರುವ ಜಿಲ್ಲೆಯಲ್ಲಿ ಹುಟ್ಟಿರುವುದು ನಮ್ಮ ಪುಣ್ಯ. ನಗರ ಟೇಕಲ್ ವೃತ್ತದಲ್ಲಿ ಪುತ್ಥಳಿ ಇರುವುದರಿಂದ ಯೋಗಿನಾರೇಯಣರ ವೃತ್ತ ಎಂದು ನಾಮಫಲಕ ಹಾಕಿಸಬೇಕು, ಜತೆಗೆ ಅಂಗಡಿಗಳ ಬಳಿಯೂ ಹೆಸರು ಬರೆಯಿಸಲು ಸಮುದಾಯದವರು ಮುಂದಾಗಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಲಿಜ ಸಮುದಾಯಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ 2ಎ ಮೀಸಲಾತಿ ತಂದರು, ತಾತಯ್ಯರ ಅಧ್ಯಯನ ಕೇಂದ್ರಕ್ಕೂ ಸಮಿತಿ ರಚನೆ ಮಾಡಿದ್ದರು. ಬಲಿಜ ಜನಾಂಗದ ಅಭಿವೃದ್ಧಿ ನಿಗಮವನ್ನೂ ರಚನೆ ಮಾಡಿದ್ದರು ಎಂದು ಸ್ಮರಿಸಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಸಾರ್ಥಕ ಬದುಕಿಗೆ ಬೇಕಾದ ಅಂಶಗಳನ್ನು ಕೀರ್ತನೆಗಳ ಮುಖಾಂತರ ತಿಳಿಸಿಕೊಟ್ಟ ತಾತಯ್ಯರು ನಮ್ಮ ಜಿಲ್ಲೆಯವರಾಗಿರುವುದು ಹೆಮ್ಮೆ. ಸಣ್ಣ ಪುಟ್ಟ ವೈಮನಸ್ಸುಗಳನ್ನು ಬಿಟ್ಟು ಒಗ್ಗಟ್ಟಾಗಿ ಮುನ್ನಡೆದರೆ ಎಲ್ಲ ಅವಕಾಶಗಳನ್ನು ಪಡೆಯಲು ಸಾಧ್ಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ನಗರಸಭೆ ಅಧ್ಯಕ್ಷೆ ಲಕ್ಷಿ$್ಮದೇವಮ್ಮ, ಉಪಾಧ್ಯಕ್ಷೆ ಸಂಗೀತಾ ಜಗದೀಶ್, ಬಲಿಜ ನೌಕರರ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಸಾದ್, ನಗರಸಭೆ ಮಾಜಿ ಸದಸ್ಯ ರೌತ್ ಶಂಕರಪ್ಪ, ಸಮುದಾಯದ ಮುಖಂಡರಾದ ಮಂಜು, ನಂದ, ಚಿಟ್ಟಿ ರಘು, ಮಂಜು ಮತಿತರಿದ್ದರು.