

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹಾಲು ಉತ್ಪಾದನೆ ಹೆಚ್ಚಾಗುತ್ತಾ ಸಾಗುತ್ತಿದೆ ಎಂದು ಕೆಎಂಎಫ್ ನಿರ್ದೇಶಕ ಶಂಕರ ಹೆಗಡೆ ಹೇಳಿದರು.
ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಂಗ್ನಳ್ಳಿ ಗ್ರಾಮದಲ್ಲಿ ನೂತನ ಹಾಲಿನಡೈರಿ ಸ್ಥಾಪನೆ ಕುರಿತು ಶುಕ್ರವಾರ ನಡೆಸಿದ ರೈತ ಮಹಿಳೆಯರ ಸಭೆಯಲ್ಲಿ ಅವರು ಮಾತನಾಡಿದರು. ಕೃಷಿ ಜೊತೆಗೆ ರೈತರು ಹೈನುಗಾರಿಕೆ ಮಾಡಿದರೆ ಆರ್ಥಿಕವಾಗಿ ಅನುಕೂಲವಾಗಲಿದೆ. ಹಾಲು ಉತ್ಪಾದನೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೆಎಂಎಫ್ ವಿಸ್ತರಣಾಧಿಕಾರಿ ದಯಾನಂದ ಎ.ಎನ್. ಮಾತನಾಡಿ, ಜಿಲ್ಲೆಯಲ್ಲಿ 303 ಹಾಲಿನ ಡೈರಿಗಳಿದ್ದು, ಪ್ರತಿದಿನ 63 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕೆಎಂಎಫ್ನಿಂದ ಹೈನುಗಾರಿಕೆಗೆ ಇರುವ ಸೌಲಭ್ಯಗಳ ಕುರಿತು ರೈತ ಮಹಿಳೆಯರಿಗೆ ಸಮಗ್ರ ಮಾಹಿತಿ ನೀಡಿದರು.
ಕೆಎಂಎಫ್ನ ಜಿಲ್ಲಾ ಮುಖ್ಯಸ್ಥ ಎಸ್.ಎಸ್. ಬಿಜ್ಜೂರ, ಪ್ರಭು ಪಾಟೀಲ, ಬಸವರಾಜ ಓಣಿಕೇರಿ ಹಾಗೂ ರೈತ ಮಹಿಳೆಯರಿದ್ದರು.