

ಮುದಗಲ್: ಪಟ್ಟಣದಲ್ಲಿ ಬೃಹತ್ ಆಲದ ಮರ ಬಿದ್ದು ಮೃತಪಟ್ಟ ದಂಪತಿ ಕುಟುಂಬಸ್ಥರಿಗೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಾಣಾಪಾಯದಿಂದ ಪಾರಾದ ಮೂರು ವರ್ಷದ ಮಗುವಿನ ಭವಿಷ್ಯದ ದೃಷ್ಟಿಯಿಂದ ಅಗತ್ಯ ಕ್ರಮಕೈಗೊಳ್ಳಬೇಕೆಂದು ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾಧ್ಯಕ್ಷ ರಫಿ ಮುದಗಲ್ ಆಗ್ರಹಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಟುಂಬಕ್ಕೆ ಆಸರೆಯಾಗಿದ್ದ ಮಗ, ಸೊಸೆ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಕೂಡಲೇ ಮೃತರ ಕುಟುಂಬಕ್ಕೆ ಸಿಎಂ ಅವರ ಅನುದಾನದಲ್ಲಿ ಸ್ಥಳೀಯ ಶಾಸಕರು ಮತ್ತು ಮಾಜಿ ಶಾಸಕರು ಕಾಳಜಿ ವಹಿಸಿ ಮಾನವೀಯತೆ ದೃಷ್ಟಿಯಿಂದ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.
ಘಟನೆ ನಡೆದು ಮೂರು ದಿನ ಕಳೆದರ ಹಾಲಿ, ಮಾಜಿ ಶಾಸಕರು ಸೌಜನ್ಯಕ್ಕಾದರೂ ಮೃತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳದಿರುವುದು ಖಂಡನೀಯ. ಸೂಕ್ತ ಪರಿಹಾರ ನೀಡಬೇಕು. ಹಳೆಯ ಮರಗಳನ್ನು ತೆರವುಗೊಳಿಸಬೇಕು. ಮುದಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಎಸ್‌ಡಿಪಿಐ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಪಾಷಾ ಕಡ್ಡಿಪುಡಿ, ಕಾರ್ಯದರ್ಶಿ ಅಲೀಫ್ ಜಂಗ್ಲಿ, ಮುದಗಲ್ ಘಟಕಾಧ್ಯಕ್ಷ ಫಾರೂಕ್ ಬೇಗ್, ಸದಸ್ಯ ಕಾಸೀಂ ಡೋಯಿ ಇದ್ದರು.