

ವಿಜಯಪುರ: ಜ್ಞಾನಪೀಠ ಪುರಸ್ಕೃತ ಕನ್ನಡದ ಮೊದಲ ಸಾಹಿತಿ, ಕನ್ನಡ ನಾಡು- ನುಡಿಗೆ ತಮ್ಮ ಜೀವನವ ಮುಡಿಪಾಗಿಟ್ಟು, ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ರಾಷ್ಟ್ರ ಕವಿ, ವಿಶ್ವ ಮಾನವರಾಗಿ ರಾಷ್ಟ್ರದಲ್ಲಿ ತಮ್ಮ ಸಾಹಿತ್ಯ ಸಂಚಲನದಿಂದ ಮೆರಗು ನೀಡಿ ರಾಷ್ಟ್ರ ಕವಿ ಎನಿಸಿಕೊಂಡಿರುವ ಕುವೆಂಪು ಅವರು ಸಾರಿದ ವಿಶ್ವ ಮಾನವ ಸಂದೇಶವನ್ನು ಎಲ್ಲರೂ ಅಳವಡಿಸಿಕೊಳ್ಳೋಣ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕುವೆಂಪು ಅವರ ಜಯಂತಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ಅವರು 20ನೇ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ ‘ಶ್ರೀ ರಾಮಾಯಣ ದರ್ಶನಂ’ ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದು, ಇಂದಿಗೂ ಅವರ ಸಾಹಿತ್ಯ ಕೃತಿಗಳು ಪ್ರಸ್ತುತದಲ್ಲಿವೆ. ಅವರ ಎರಡು ಬೃಹತ್ ಕಾದಂಬರಿಗಳಾದ ‘ಕಾನೂನು ಹೆಗ್ಗಡತಿ’ ಹಾಗೂ ‘ಮಲೆಗಳಲ್ಲಿ ಮದುಮಗಳು’ ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದು, ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ ಎಂದು ಹೇಳಿದರು.
ಪೂಜಾ ಕೆ.ಎಸ್. ಉಪನ್ಯಾಸ ನೀಡುತ್ತಾ, ಕುವೆಂಪು ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧಿಯಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ಶ್ರೇಷ್ಠ ಬರಹಗಾರರು. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡು, ವಿಶ್ವಮಾನವ ಸಂದೇಶ ನೀಡಿದವರು ಎಂದು ತಿಳಿಸಿದರು.
ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಜಿಲ್ಲಾಧಿಕಾರಿ ರಾಜಶೇಖರ ದೈವಾಡಿ ಮಾತನಾಡಿ, ದೇಶ ಕಂಡ ಅಪ್ರತಿಮ ಕನ್ನಡ ಸಾಹಿತ್ಯ ಜೀವಿ, ಕನ್ನಡ ಅಭಿಮಾನಿ ಅಷ್ಟೇ ಅಲ್ಲದೇ ಅವರೊಬ್ಬ ವಿಶ್ವ ಮಾನವರು ಎಂಬುದನ್ನು ಇಂದು ನಾವು ಸ್ಮರಿಸಬೇಕು. ರಾಷ್ಟ್ರ ಕವಿ ಕುವೆಂಪು ಅವರು ಸಮಾಜದಲ್ಲಿ ಜಾತಿ, ಮತ, ಧರ್ಮದ ಎಲ್ಲೆಮೀರಿ ಮುಂದೆ ಹೋಗಬೇಕೆಂದು ಸಾರಿದ್ದರು. ಎಲ್ಲರೂ ವಿಶ್ವಮಾನವರಾದರೆ ಸಾಕು ಎಂಬುದು ಅವರ ಅತೀ ಮುಖ್ಯ ಚಿಂತನೆಯಾಗಿತ್ತು. ಆ ನಿಟ್ಟಿನಲ್ಲಿ ಅವರು ನಡೆದು ಬಂದ ದಾರಿ, ವಿಚಾರಧಾರೆ, ಸಾಹಿತ್ಯದ ಮೌಲ್ಯಗಳನ್ನು ಅರಿತು ಅವರ ಮೌಲ್ಯಾಧಾರಿತ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜಗತ್ತಿನಲ್ಲಿ ಮಾನವ ಜನ್ಮ ಪಡೆದ ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಜೀವನ ಸಾಗಿಸಿ, ಶ್ರೇಷ್ಠ ವ್ಯಕ್ತಿಗಳ ಜೀವನಾದರ್ಶಗಳು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಚುನಾವಣಾ ತಹಸೀಲ್ದಾರ್ ಪ್ರೇಮಸಿಂಗ್ ಪವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಜಿಪಂ ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ವಿದ್ಯಾವತಿ ಅಂಕಲಗಿ, ಅಡಿವೆಪ್ಪ ಸಾಲಗಲ್ಲ, ಗಿರೀಶ ಕುಲಕರ್ಣಿ, ಭೀಮರಾಯ ಜಿಗಜಿಣಗಿ ಮತ್ತಿತರರಿದ್ದರು. ರಕ್ಷಂದಾ ತಿಳಗೊಳ ಕುವೆಂಪು ಅವರ ಸುಮಧುರವಾದ ಗೀತೆಗಳನ್ನು ಪ್ರಸ್ತುತಪಡಿಸಿದರು. ಎಚ್. ಮಮದಾಪುರ ಕಾರ್ಯಕ್ರಮ ನಿರ್ವಹಿಸಿದರು.