

ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ರಕ್ತದ ಅಭಾವ ಹೆಚ್ಚಾಗಿದ್ದು, ಯುವ ಸಮುದಾಯ ಸ್ವಯಂಪ್ರೇರಿತವಾಗಿ ರಕ್ತದಾನ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ ಹೇಳಿದರು.
ಇಲ್ಲಿನ ನೆಹರು ನಗರದ ಕೆಎಲ್ಇ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಕೆಎಲ್ಇ ಸಂಸ್ಥೆ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಿಮ್ಸ್, ರಾಜ್ಯ ರಕ್ತ ಚಾಲನಾ ಪರಿಷತ್ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಕ್ತದಾನ ಶಿಬಿರಗಳು ನಿರಂತರವಾಗಿ ನಡೆಸುವ ಜತೆಗೆ ಸಾರ್ವಜನಿಕರೂ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ವೈದ್ಯಕಿಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ ಮಾತನಾಡಿ, ರಕ್ತದಾನ ಶ್ರೇಷ್ಠ. ರಕ್ತದಾನದಿಂದ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಹೊಸ ರಕ್ತದ ಹರಿವಿನಿಂದ ಕಾರ್ಯಕ್ಷಮತೆ ಹಾಗೂ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಜತೆಗೆ ಕೊಬ್ಬಿನಾಂಶ ಕಡಿಯಾಗುತ್ತದೆ. 18ರಿಂದ 48 ವಯಸ್ಸಿನವರು ವರ್ಷದಲ್ಲಿ 3 ಸಲ ರಕ್ತದಾನ ಮಾಡಬಹುದೆಂದು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಾಂದನಿ ದೇವಡಿ ಮಾತನಾಡಿ, ಜಿಲ್ಲೆಯ 15 ರಕ್ತಕೇಂದ್ರಗಳಿಂದ 2024&25ರಲ್ಲಿ 48,247ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. 622 ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಂಡು 31,940 ರಕ್ತದ ಯೂನಿಟ್ ಸಂಗ್ರಹಿಸಲಾಗಿದೆ. ಜಿಲ್ಲೆಯ 11ರಕ್ತ ಸಂಗ್ರಹಣಾ ಟಕಗಳಲ್ಲಿ 9 ಕಾರ್ಯನಿರ್ವಹಿಸುತ್ತಿವೆ. ಜಿಪಂ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗ್ರಾಪಂ ಮಟ್ಟದಲ್ಲಿ ಮಾಸಿಕ 10&15 ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿರುವುದು ರಾಜ್ಯದಲ್ಲಿಯೇ ವಿನೂತನ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಕೆಎಲ್ಇ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞೆ ಡಾ. ಸುಜಾತಾ ಜಾಲಿ, ಪ್ರೋಬೇಶನರಿ ಐಎಎಸ್ ಅಧಿಕಾರಿ ಆಭಿನವ ಜೈನ್, ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ ಡಾ. ಐ.ಪಿ. ಗಡಾದ, ಪ್ರಾಚಾರ್ಯ ಡಾ ಎನ್.ಎಂ. ಮಹಾಂತಶೆಟ್ಟಿ, ಮಲ್ಲಿಕಾರ್ಜುನ್ ಕೆ.ಎಸ್, ಡಾ.ಎಸ್.ವಿ. ವೀರಗಿ, ಡಾ.ದೇವಿ ಭೂಬತಿ, ಗಿರೀಶ ಬುಡರಕಟ್ಟಿ, ಡಾ: ಬಿ.ಎನ್. ತುಕ್ಕಾರ, ಡಾ. ಮಾಧವ ಪ್ರಭು, ಡಾ. ಅವಿನಾಶ ಕವಿ ಇತರರಿದ್ದರು.