ನಗರಸಭೆ ಅಕ್ರಮಗಳಿಗೆ ಕಡಿವಾಣ ಬೀಳಲಿ

20arsph1ep
ನಗರಸಭೆ ಕಚೇರಿ ಆವರಣದಲ್ಲಿ ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಪ್ರತಿಭಟನೆ ನಡೆಸಿದರು.
Published on

ಅರಸೀಕೆರೆ: ನಗರಸಭೆ ಅಕ್ರಮಗಳಿಗೆ ಜಿಲ್ಲಾಧಿಕಾರಿಗಳು ಕಡಿವಾಣ ಹಾಕುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಆವರಣದಲ್ಲಿ ಜೆಡಿಎಸ್, ಬಿಜೆಪಿ ಸದಸ್ಯರು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸಾಮಾನ್ಯ ಸಭೆ ಗಮನಕ್ಕೆ ತಾರದೇ ನಿಯಮ ಉಲ್ಲಂಘಿಸಿ ಖಾತೆ, ಇ-ಸ್ವತ್ತು ನೀಡಿರುವುದು ಅಕ್ಷಮ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಎಲ್ಲರಿಗೂ ಸೂರು ಯೋಜನೆಯಲ್ಲಿ ನಿರ್ಮಿಸಲಾಗಿರುವ ಮನೆ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಖಾಸಗಿ ಬಡಾವಣೆಗಳಿಗೆ ಸರ್ಕಾರದ ವೆಚ್ಚದಲ್ಲಿ ನೀರಿನ ಪೈಪ್ ಲೈನ್ ಹಾಕಲಾಗುತ್ತಿದೆ. ಟೆಂಡರ್ ಕರೆಯದೇ ಕೆಲ ಕಾಮಗಾರಿಗಳನ್ನು ನಡೆಸಿ ಕೊಳ್ಳೆ ಹೊಡೆಯುತ್ತಿದ್ದು ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡರ ಕುಮ್ಮಕ್ಕಿನಿಂದ ನಗರಸಭೆ ಅಧ್ಯಕ್ಷ ಸಮೀವುಲ್ಲಾ ಸಾರ್ವಜಿನಿಕರ ಹಣ ಕೊಳ್ಳೆಹೊಡೆಯುತ್ತಿದ್ದಾನೆ, ಇಂತಹ ವ್ಯಕ್ತಿಗಳಿಂದ ಬಡವರು ಸೂರು ಪಡೆಯಲು ಸಾಧ್ಯವೇ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್‌ನ ಸುಜಾತಾ ರಮೇಶ್, ಬಿಜೆಪಿ ಸದಸ್ಯರಾದ ಸಿ.ಗಿರೀಶ್, ಭಾಸ್ಕರ್, ಪಕ್ಷೇತರ ಸದಸ್ಯ ಮೇಲುಗಿರಿಗೌಡ, ಶ್ವೇತಾರಮೇಶ್, ಅಭಿರಾಮಿ, ಹರ್ಷವರ್ಧನ್‌ರಾಜ್, ಶಿವನ್‌ರಾಜ್, ಎ.ಬಿ.ಗುರುಸಿದ್ದೇಶ್, ಮಾದನಹಳ್ಳಿ ನಾಗರಾಜ್, ಮೋಹನ್‌ಕುಮಾರ್, ಶೇಖರ್ ಯಾದವ್ ಸೇರಿದಂತೆ ಹಲವರು ನಗರಸಭೆ ಆವರಣದಲ್ಲಿ ಶಾಮಿಯಾನ ಜಡಿದು, ಮಹಾತ್ಮ ಗಾಂಧೀಜಿ ಪೋಟೋ ಇರಿಸಿ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.

ಎನ್.ಆರ್.ಸಂತೋಷ್ ಮಾತಿನಿಂದ ಕೆರಳಿದ ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಜತೆಗೆ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪರಿಸ್ಥಿತಿ ಕೈ ಮೀರುತ್ತಿದ್ದ ದೃಶ್ಯ ಕಂಡು ನಿಯಂತ್ರಿಸಲು ಪೊಲೀಸರು ಪರದಾಡಿದರು. ಸಂತೋಷ್ ಬೆಂಬಲಿಗರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರ ಘೋಷಣೆ ಕೂಗಿದರೆ, ಕಾಂಗ್ರೆಸ್ ಮುಖಂಡರು ಕೆ.ಎಂ.ಶಿವಲಿಂಗೇಗೌಡ ಪರ ಜೈಕಾರ ಹಾಕಿದರು.

ಕೊಲೆ ಮಾಡಲಿ: ಕುಟುಂಬ ಸದಸ್ಯರ ಜತೆ ಪ್ರತಿಭಟನೆ ಕುಳಿತಿದ್ದ ಎನ್.ಆರ್.ಸಂತೋಷ್ ಅವರನ್ನು ಪೊಲೀಸರು ಮನವೊಲಿಸಲು ಮುಂದಾದಾದ ವೇಳೆ ನಗರಸಭೆ ಅಧ್ಯಕ್ಷನ ಬೆಂಬಲಿಗ ನನ್ನನ್ನು ಕೊಲೆ ಮಾಡುವುದಾಗಿ ನಿಮ್ಮೆದುರಿಗೇ ಹೇಳಿದ್ದಾನೆ. ಸನಾತನ ಹಿಂದು ಪರಂಪರೆ ಮೈಗೂಡಿಸಿಕೊಂಡಿರುವ ನನ್ನ ರಕ್ತ ಹರಿಸುವುದಾಗಿ ಬೆದರಿಕೆ ಹಾಕಲಾಗಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನಮ್ಮ ಹೋರಾಟಕ್ಕೆ ನ್ಯಾಯ ದೊರೆಯದ ಹೊರತು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಜೆಯಾದರೂ ಎರಡೂ ಕಡೆಯವರು ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವಿಟ್ಟು ಪರ, ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಹೋರಾಟ, ಪ್ರತಿಹೋರಾಟ ಮುಂದುವರಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಎರಡೂ ಗುಂಪುಗಳ ನಡುವೆ ಬ್ಯಾರಿಕೇಡ್ ಇರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net