ಮಕ್ಕಳಲ್ಲಿ ಜಾನಪದ ಕಲೆ ಬೆಳೆಸೋಣ

20 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜನಪದ ಕಲೆ ಮನೆಯಿಂದಲೇ ಬೆಳೆದಿದ್ದು, ಪ್ರತಿಯೊಬ್ಬರಲ್ಲೂ ಹುಟ್ಟಿನಿಂದ ಒಂದು ಪ್ರತಿಭೆ ಇರುತ್ತದೆ. ಆ ಅಸಾಧರಣ ಪ್ರತಿಭೆ ಹೊರಹಾಕಬೇಕು. ಮಕ್ಕಳಲ್ಲಿ ಜಾನಪದ ಕಲೆ ಬೆಳೆಸಬೇಕು ಎಂದು ಕಲಾವಿದ ಇಮಾಮಸಾಬ್​ ವಲ್ಲೆಪ್ಪನವರ ಹೇಳಿದರು.

ನಗರದ ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಜಾನಪದ ಸಂಭ್ರಮ ಹಾಗೂ ಶಹನಾಯಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನದಲ್ಲಿ ಆಧುನಿಕತೆಯ ಪ್ರಭಾವವು ನಮ್ಮನ್ನೇ ನಾವು ಮರೆಯುವಷ್ಟರ ಮಟ್ಟಿಗೆ ಹಾಸುಹೊಕ್ಕಾಗಿದೆ. ಹೀಗಾಗಿ ಅದನ್ನು ಅವಶ್ಯಕೆಗೆ ತಕ್ಕಷ್ಟು ಮಾತ್ರ ಬಳಸಿಕೊಳ್ಳಬೇಕು ಎಂದರು.

ಡಾ. ರಾಮು ಮೂಲಗಿ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿ ಮೆಟ್ಟಿ ನಿಲ್ಲುವ ಶಕ್ತಿ ನಮ್ಮ ಜಾನಪದ ಕಲೆಗೆ ಮಾತ್ರ ಇದೆ. ಯುವಕರಲ್ಲಿ ಜಾನಪದದ ಕುರಿತು ತಿಳಿವಳಿಕೆ ಮತ್ತು ಅದರ ಪ್ರಾಯೋಗಿಕ ತರಬೇತಿ ಅವಶ್ಯಕತೆ ಇದೆ. ಆದರೆ ಇಂದು ಇಡೀ ಕರ್ನಾಟಕದಲ್ಲಿ ಜಾನಪದ ಕಲೆ ಉಳಿದಿದ್ದು ಉತ್ತರ ಕರ್ನಾಟಕದಲ್ಲಿ ಮಾತ್ರ ಎಂದರು.

ಡಾ. ಪ್ರಕಾಶ ಮಲ್ಲಿಗವಾಡ, ಶಹಜಹಾನ ಮುದಕವಿ ಮಾತನಾಡಿದರು. ಯುವ ಕಲಾವಿದ ಶ್ರೀಧರ ಭಜಂತ್ರಿ ಅವರಿಗೆ ಮೋಹರಿ ಸಾಧಕ ಹಾಗೂ ಇಮಾಮಸಾಬ್​ ವಲ್ಲೆಪ್ಪನವರಗೆ ಜಾನಪದ ಜಂಗಮ ಬಿರುದು ನೀಡಿ ಗೌರವಿಸಲಾಯಿತು.

ಅಪೂರ್ವಾ ಮಹಾಲೆ, ಸುಭಾಷ ಭಜಂತ್ರಿ, ಪ್ರಣವ ಮಹಾಲೆ, ನಾಗಲಿಂಗ ಪಾಟೀಲ, ಸೋಹನ ಮಹಾಲೆ, ಇತರರು ಇದ್ದರು.

ಸಂತೋಷ ಮಹಾಲೆ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ನಂತರ ಯುವ ಕಲಾವಿದ ಶ್ರೀಧರ ಭಜಂತ್ರಿ ಶಹನಾಯಿ ವಾದನ ಹಾಗೂ ಇಮಾಮಸಾಬ್​ ವಲ್ಲೆಪ್ಪನವರ ಸಂಗಡಿಗರು ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net