ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ರೂಢಿಸಿಕೊಳ್ಳಲಿ

kkl
Published on

ವಿಜಯವಾಣಿ ಸುದ್ದಿಜಾಲ ಉಡುಪಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯ ಜತೆಗೆ ಸಂಸ್ಕಾರಯುತ ನಡವಳಿಕೆಗಳನ್ನೂ ರೂಢಿಸಿಕೊಳ್ಳಬೇಕು. ಹಿರಿಯರಿಂದ ಬಳುವಳಿಯಾಗಿ ಬಂದ ಸಂಸ್ಕಾರಗಳು, ನಿತ್ಯಾನುಷ್ಠಾನಗಳನ್ನು ಮುಂದಿನ ಪೀಳಿಗೆಗೂ ವರ್ಗಾಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ ಆಯೋಜಿಸುತ್ತಿರುವ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಕಾರ್ಯ ಶ್ಲಾಘನಾರ್ಹ ಎಂದು ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್ ಹೇಳಿದರು. ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ಅಡಿಟೋರಿಯಂನಲ್ಲಿ ಆಯೋಜಿಸಿದ್ದ 11ನೇ ವರ್ಷದ ವಿದ್ಯಾಪೋಷಕ ನಿಧಿ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಲೆಕ್ಕ ಪರಿಶೋಧಕ ಸಿಎ ಸುಧೀರ್ ಪ್ರಭು ಮಾತನಾಡಿ, ನಿರಂತರ ಬದಲಾಗುತ್ತಿರುವ ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ. ಅದಕ್ಕೆ ಪೂರಕವಾಗಿ ನಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು. ಉದ್ಯಮಿ ಐ.ರಘುವೀರ ಶೆಣೈ ಮಾತನಾಡಿ, ಎಂಟು ಸಮಾಜಮುಖಿ ಯೋಜನೆಗಳ ಜತೆಗೆ ಹೊಸದಾಗಿ ಸೇರ್ಪಡೆಗೊಂಡ ಒಂಬತ್ತನೇ ಕನಸಿನ ಯೋಜನೆ ವಯೋವಂದನಾ ಸಾಮಾಜಿಕ ಹೊಣೆಗಾರಿಕೆ ತಿಳಿಸುವ ಅದ್ಭುತ ಕಾರ್ಯವಾಗಿದೆ ಎಂದರು. ನೆರವು, ಗೌರವಾರ್ಪಣೆ: ಸಾಲಿಗ್ರಾಮದ ವಿವೇಕ್ ಭಟ್ ಅವರ ತುರ್ತು ಚಿಕಿತ್ಸೆಗೆ ವೇದಿಕೆಯಿಂದ 1 ಲಕ್ಷ ರೂ.ನೆರವು ನೀಡಲಾಯಿತು. ಉಡುಪಿಯ ಗಾಂಧಿ ಆಸ್ಪತ್ರೆಯ ತಜ್ಞರಿಂದ ಆರೋಗ್ಯ ಉಚಿತ ತಪಾಸಣೆ, ತುರ್ತು ಚಿಕಿತ್ಸೆ ಹಾಗೂ ನೇತ್ರ ಚಿಕಿತ್ಸಾ ಸೌಲಭ್ಯ ಒದಗಿಸಿದ ಡಾ.ರಾಮಚಂದ್ರ ಕಾಮತ್, ಡಾ.ಜಯಪ್ರಕಾಶ್ ಭಟ್, ಡಾ.ಯು.ಎಸ್.ಕಾಮತ್ ಅವರನ್ನು ಅಭಿನಂದಿಸಲಾಯಿತು. ಮಂಗಳೂರಿನ ಶ್ರೀ ಕುಡ್ತರಿ ಮಹಮ್ಮ ದೇವಸ್ಥಾನದ ಪುರೋಹಿತ ವಿಠ್ಠಲ್ ಭಟ್ ಶುಭಾಶಂಸನೆಗೈದರು. ಜಿಎಸ್‌ಬಿ ವೇದಿಕೆ ಅಧ್ಯಕ್ಷ ಜಿ.ಸತೀಶ್ ಹೆಗ್ಡೆ ಕೋಟ, ಕೋಶಾಧ್ಯಕ್ಷ ವಿನೋದ್ ಶೆಣೈ, ಗಾಯಕ ಶಂಕರ ಶಾನುಭೋಗ್, ಸತ್ಯ ಫೌಂಡೇಶನ್‌ನ ಸತ್ಯಭಾಮಾ ಜಿ.ಕಾಮತ್, ವಿದ್ಯಾರ್ಥಿವೇತನ ನಿಧಿ ಅಧ್ಯಕ್ಷ ಸಿಎ ಎಸ್.ಎಸ್.ನಾಯಕ್, ಸಂಯೋಜಕ ಸುಬ್ರಹ್ಮಣ್ಯ ಪ್ರಭು ಉಪಸ್ಥಿತರಿದ್ದರು. ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಸಂಚಾಲಕ ಆರ್.ವಿವೇಕಾನಂದ ಶೆಣೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೋಪಿಸಿದರು.

85 ಲಕ್ಷ ರೂ. ಸ್ಕಾಲರ್‌ಶಿಪ್ ವಿತರಣೆ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸಮುದಾಯದ 393 ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ ನಿಧಿ ವಿದ್ಯಾರ್ಥಿ ವೇತನ, ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯನ್ವಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ 179 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಾಣೂರು ಸರ್ಕಾರಿ ಪದವಿಪೂರ್ವ ಕಾಲೇಜಿನ 20 ಮತ್ತು ಸರ್ಕಾರಿ ಪ್ರೌಢಶಾಲೆಯ 10 ವಿದ್ಯಾರ್ಥಿಗಳಿಗೆ ನೀಡಲಾದ ವಿದ್ಯಾರ್ಥಿವೇತನದ ಚೆಕ್ಕನ್ನು ಪ್ರಾಂಶುಪಾಲೆ ಸುಚೇತ ಕಾಮತ್ ಅವರಿಗೆ ಹಸ್ತಾಂತರಿಸಲಾಯಿತು. 572 ವಿದ್ಯಾರ್ಥಿಗಳಿಗೆ ಒಟ್ಟು 85 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಮೆಡಿಕಲ್, ಸಿಎ , ಕಂಪನಿ ಸೆಕ್ರೆಟರಿ ಮತ್ತು ಪಿಎಚ್.ಡಿ ಪದವಿಗಳಲ್ಲಿ ಸಾಧನೆಗೈದ ರಾಜ್ಯದ 148 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net