ಸಾಹಿತ್ಯ ಸಮ್ಮೇಳನ ಚರಿತ್ರೆ ಸೃಷ್ಠಿಸಲಿ

Published on

ಬಳ್ಳಾರಿ ; ಜಿಲ್ಲೆಯಲ್ಲಿ ಜರುಗಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಚರಿತ್ರೆ ಸೃಷ್ಠಿಸಲಿ, ಕಸಾಪಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಹೇಳಿದರು.

ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಡಳಿತವು ಸಂಪೂರ್ಣ ಸಜ್ಜುಗೊಳಿಸಿ ಸರ್ಕಾರದಿಂದ ಸೌಲಭ್ಯ, ನೆರವು ದೊರಕಿಸಿ ಕೊಡಲಾಗುವುದು. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರ ಇನ್ನಷ್ಟು ನಿಕಟವಾಗಿ ಕೆಲಸ ಮಾಡಲಿದೆ ಎಂದರು.

ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಮುಕ್ತ ಕಂಠದಿಂದ ಶ್ಲಾಘಿಸುವೆ. ಅಧ್ಯಕ್ಷತೆ ವಹಿಸಿರುವ ಐದನೇ ಹಾಗೂ ಮೊದಲ ಅಲ್ಪಸಂಖ್ಯಾತ ಮಹಿಳೆಯಾಗಲಿದ್ದಾರೆ ಎಂಬುದು ಸಂತಸದ ವಿಷಯವಾಗಿದೆ ಎಂದರು.

ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಮಾತನಾಡಿ, ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನ ಸರ್ವಾಧ್ಯಕ್ಷರಾಗಿ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಎಲ್ಲ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಸಮ್ಮೇಳನಗಳಿರುವ ಚಾರಿತ್ರಿಕ ಪರಂಪರೆಗೆ ಒತ್ತು ನೀಡಬೇಕಿದೆ ಎಂದರು.

ಇದೇ ವೇಳೆ ಕಸಾಪದ ಆಜೀವ ಸದಸ್ಯರಾಗಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಾಂಕೇತಿಕವಾಗಿ ವಿಶೇಷ ಗುರುತಿನ ಚೀಟಿ ನೀಡಲಾಯಿತು. ಬಳಿಕ ಕಸಾಪದ ಕಚೇರಿಯ ಹೊರ ಮತ್ತು ಒಳ ಆವರಣ ವೀಕ್ಷಿಸಿ ಪರಂಪರೆ ಮತ್ತು ಆಧುನಿಕತೆ ಬೆಸೆದಿರುವ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಟ್.. ಜಿಲ್ಲೆಯಲ್ಲಿ ಜರುಗುಲಿರುವ ಸಮ್ಮೇಳನಕ್ಕೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಿ ಯಶಸ್ವಿಗೊಳಿಸಲಾಗುವುದು.

- ಪ್ರಶಾಂತ ಕುಮಾರ ಮಿಶ್ರಾ, ಡಿಸಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net