

ಹಾನಗಲ್ಲ: ಸದ್ಗುಣ, ಪುಣ್ಯಕಾರ್ಯಗಳೇ ಸಂಪತ್ತಾಗಬೇಕಾದ ಪುಣ್ಯಭೂಮಿ ಭಾರತದಲ್ಲಿ ದುರಭ್ಯಾಸಗಳಿಗೆ ಸಮಾಜ ಬಲಿಯಾಗುತ್ತಿರುವುದು ದುರಂತವಾಗಿದೆ. ಬೆಚ್ಚಿ ಬೀಳುವಂತಹ ಸಮಾಜ ವಿರೋಧಿ ಘಟನೆಗಳು ಭಯ ಹುಟ್ಟಿಸುತ್ತಿವೆ ಎಂದು ಬೊಮ್ಮನಹಳ್ಳಿಯ ಗುರುಪಾದೇಶ್ವರ ವಿರಕ್ತಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಬೊಮ್ಮನಹಳ್ಳಿಯ ಗುರುಪಾದೇಶ್ವರ ವಿರಕ್ತಮಠದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ವಚನ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಒಳ್ಳೆಯದನ್ನು ಕೇಳಿ, ಹೇಳಿ ನಮ್ಮ ಮನಸಿಗೆ ಸಂಸ್ಕಾರ ಪಡೆದುಕೊಳ್ಳುವ ಪುಣ್ಯಕಾಲವೇ ಶ್ರಾವಣ. ಇಂದಿನ ಯುವ ಪೀಳಿಗೆಗೆ ವಚನಗಳ ಅರ್ಥ, ಅನುಭಾವ ನೀಡಬೇಕಾಗಿದೆ. ನಾಳೆಯ ನಮ್ಮ ಸಮಾಜಕ್ಕಾಗಿ ಈಗಿನ ಮಕ್ಕಳು ಯುವಕರಿಗೆ ಉತ್ತಮ ಸಂಸ್ಕಾರ ನೀಡುವುದೇ ದೊಡ್ಡ ಫಲಪ್ರದ ಕಾರ್ಯ. ಮುಂದಿನ ವರ್ಷ ಹಾವೇರಿ ಜಿಲ್ಲಾ ಮಟ್ಟದಲ್ಲಿ ವಚನ ಕಂಠಪಾಠ ಸ್ಪರ್ಧೆ ನಡೆಸುವ ಚಿಂತನೆಯಿದೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ ಮಾತನಾಡಿ, ನಮ್ಮೊಡನೆ ಇರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ವಚನಗಳೇ ಬಹುಸಂಖ್ಯೆಯಲ್ಲಿವೆ. ಶರಣರ ಸಂದೇಶ ಸಮಾಜಕ್ಕೆ ತಲುಪಿಸುವುದೇ ಇದರ ಮಹತ್ತರ ಉದ್ದೇಶವಾಗಿದೆ ಎಂದರು.
ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಸಮಾಜದಲ್ಲಿ ನಿತ್ಯ ದೌರ್ಜನ್ಯ ಪ್ರಕರಣಗಳು ಭಯಾನಕತೆ ಉಂಟು ಮಾಡುತ್ತಿವೆ. ಇವನ್ನೆಲ್ಲ ತಡೆಯಲು ಶರಣರ ವಚನಗಳ ಸಾರವನ್ನು ಸಮಾಜದಲ್ಲಿ ಬಿತ್ತಬೇಕು ಎಂದರು.
ವಿಜೇತರು: ಪ್ರೌಢಶಾಲಾ ವಿಭಾಗದಲ್ಲಿ 126 ವಚನಗಳನ್ನು ಕಂಠಪಾಠದಿಂದ ಪ್ರಸ್ತುತಪಡಿಸಿದ ಫಿಜಾಅಂಜುಂ ಬುಕ್ಕಿಟಗಾರ ಪ್ರಥಮ, ಶ್ರೀಶಾ ಗ್ಯಾರಿ ದ್ವಿತೀಯ, ಅಂಜಲಿ ಚಕ್ರಸಾಲಿ ತೃತೀಯ, ಸುಕನ್ಯಾ ಪಾಟೀಲ ಸಮಾಧಾನಕರ ಬಹುಮಾನ ಪಡೆದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ದರ್ಶಿನಿ ಯಳ್ಳೂರ ಪ್ರಥಮ, ಕೆ. ಅನ್ವಿತಾ ದ್ವಿತೀಯ, ಎಂ.ಕೆ. ಶ್ರಾವಣಿ, ನಮ್ರತಾ ಗುಡದಳ್ಳಿ ತೃತೀಯ ಬಹುಮಾನ ಪಡೆದರು.
ಜಿಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪೂರ, ಮಲ್ಲಿಕಾರ್ಜುನ ಹಳೇಮನಿ, ಸವಿತಾ ರಮೇಶ, ಪ್ರದೀಪ ನೆಲವಿಗಿ, ಚನ್ನಪ್ಪ ಅಂಗಡಿ, ಶಿವಪ್ರಕಾಶ ಬಳಿಗಾರ, ಮಲ್ಲಣ್ಣ ಹುಕ್ಕೇರಿ, ಲೋಕೇಶ ಹೊಳಲದ ಅತಿಥಿಗಳಾಗಿದ್ದರು. ವಚನ ಕಂಠಪಾಠ ಸ್ಪರ್ಧೆಯ ನಿರ್ಣಾಯಕರಾಗಿ ಪ್ರೊ.ಸಿದ್ದೇಶ್ವರ ಹುಣಸಿಕಟ್ಟಿ, ಜಿ.ಎಂ. ಅರಗೋಳ, ಡಾ. ಆನಂದ ಇಂದೂರ, ಎಸ್. ನಿರ್ಮಲಾ, ಶಕುಂತಲಾ ಕೋಣನವರ ಕಾರ್ಯ ನಿರ್ವಹಿಸಿದರು.