

ಖಾನಾಪುರ: ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ಪ್ರೌಢಶಾಲೆಯನ್ನಾಗಿ ಉನ್ನತೀಕರಿಸಿದ ಆದೇಶವನ್ನು ಖಾಸಗಿ ಶಾಲೆಗಳ ಒತ್ತಡದಿಂದ ರದ್ದುಗೊಳಿಸಿ, ಗಹೋಳಿ ಗ್ರಾಮಕ್ಕೆ ಸರ್ಕಾರ ವರ್ಗಾಯಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಕಳೆದ ಆಗಸ್ಟ್ ೭ರಂದು ರಾಜ್ಯ ಸರ್ಕಾರ ಗ್ರಾಮಕ್ಕೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆ ಮೇಲ್ದರ್ಜೆಗೇರಿಸಿ ಪ್ರೌಢಶಾಲೆಯಾಗಿಸುವ ಆದೇಶ ಹೊರಡಿಸಿತ್ತು. ಅಂದಿನಿಂದ ೮ನೇ ತರಗತಿ ಸಹ ಕಾರ್ಯಾರಂಭವಾಗಿದ್ದು, ಖಾಸಗಿ ಸಂಸ್ಥೆಗಳ ಲಾಭಿಗೆ ಮಣಿದು ಸೆ.೧೬ರಂದು ಆದೇಶ ರದ್ದುಗೊಳಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸೆ.೨೦ರೊಳಗಾಗಿ ಉನ್ನತೀಕರಿಸಿದ ಪ್ರೌಢಶಾಲೆ ಮುಂದುವರಿಯಬೇಕು ಇಲ್ಲದಿದ್ದರೆ, ಇಟಗಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ
ಡಿಡಿಪಿಐ ಲೀಲಾವತಿ ಹಿರೇಮಠ ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿ, ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗುವುದು. ಸಮಸ್ಯೆ ಬಗೆಹರಿಯುವವರೆಗೆ ೮ನೇ ತರಗತಿ ವಿದ್ಯಾರ್ಥಿಗಳು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹಾಂತೇಶ ಕಿತ್ತೂರ, ಬಿಆರ್‌ಪಿ ಎಸ್.ಜಿ.ನಾಯ್ಕ, ಬಿಐಆರ್‌ಟಿ ಶಂಕರ ಕಮ್ಮಾರ, ಗ್ರಾಪಂ ಅಧ್ಯಕ್ಷ ರುದಪ್ಪ ತುರಮರಿ, ಎಸ್‌ಡಿಎಂಸಿ ಅಧ್ಯಕ್ಷ ಮೌನೇಶ ಬಡಿಗೇರ, ಕಲ್ಮೇಶ ಮುತ್ನಾಳ, ಕೇದಾರಿ ಸೋನಪ್ಪನವರ, ರಾಯಪ್ಪ ಬಳಗಪ್ಪನವರ, ವಿಠ್ಠಲ ಕಿಳೋಜಿ, ದ್ಯಾಮಣ್ಣ ಗಂಗನಾಯ್ಕ, ಮಂಜುನಾಥ ಕುಲವಳ್ಳಿ, ಸಂತೋಷ ಕಿಳೋಜಿ, ಬಾಳಪ್ಪ ಬೆಣಚಮರಡಿ, ಬಸವರಾಜ ದಳವಾಯಿ ಬಸವರಾಜ ತಳವಾರ, ಗಂಗಪ್ಪ ಬಡ್ಡಿ ಇತರರಿದ್ದರು.