ಪುರಾತನ ಪರಂಪರೆ ಮುಂದುವರಿಸೋಣ

1
Published on

ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಸಲಹೆ | ಜೂನಿಯರ್​ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ತುಮಕೂರು
ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ "ತುಮಕೂರು ದಸರಾ ಉತ್ಸವ'ದಲ್ಲಿ ಶಕ್ತಿ ದೇವತೆ ಪ್ರತಿಷ್ಠಾಪಿಸುವ ಮೂಲಕ ಧಾರ್ಮಿಕ ಆಚರಣೆಯ ಪೂಜಾ ವಿಧಿವಿಧಾನಗಳೊಂದಿಗೆ ಪ್ರಾರಂಭಿಸಬೇಕು ಎಂದು ಜಿಲ್ಲೆಯ ವಿವಿಧ ದೇವಾಲಯಗಳ ಅರ್ಚಕರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.


ದಸರಾ ಉತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನಗಳ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಅರ್ಚಕರಿಂದ ಸಲಹೆ ವ್ಯಕ್ತವಾಯಿತು. ದಸರಾ ಉತ್ಸವದ ಅಂಗವಾಗಿ ಅಮಾವಾಸ್ಯೆ ನಂತರ ಪ್ರಾರಂಭವಾಗುವ ನವರಾತ್ರಿಯ ಮೊದಲ ದಿನವಾದ ಅ.3ರಂದು ನಗರದ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಶಕ್ತಿ ದೇವತೆ ಪ್ರತಿಷ್ಠಾಪಿಸಿ ಪ್ರತಿನಿತ್ಯ ವಿವಿಧ ಅಲಂಕಾರಗಳಿಂದ ದೇವಿ ಸಿಂಗರಿಸಿ ಹೋಮ ಹವನಾದಿಗಳಿಂದ ಪೂಜಿಸಬೇಕು. ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬೆಳಗಿನಿಂದ ಸಂಜೆವರೆಗೂ ಪ್ರಸಾದ ವಿನಿಯೋಗವಾಗಬೇಕು. ಗಣಪತಿ ಪೂಜೆ, ಪೂಣ್ಯಾಹ ವಾಚನ, ಭೂಮಿ ಪೂಜೆ, ಧ್ವಜ ಪೂಜೆ, ಮಂಟಪ ಪೂಜೆ ಮತ್ತು ಧ್ವಜಾರೋಹಣ, ಗಣಪತಿ ಹೋಮ, ದುರ್ಗಾ ಹೋಮ, ಪ್ರತಿ ನಿತ್ಯ ಮಹಾ ಮಂಗಳಾರತಿ, ಮತ್ತಿತರ ಆಗಮ ಪೂಜಾ ಕೈಂಕರ್ಯ ನಡೆಯಬೇಕು ಎಂದು ಸಲಹೆ ನೀಡಿದರು.


ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮಾತನಾಡಿ, ದಸರಾ ಉತ್ಸವದ ಪ್ರಯುಕ್ತ ಅಕ್ಟೋಬರ್​ 3ರಿಂದ ಪ್ರಾರಂಭವಾಗುವ ನವರಾತ್ರಿ ಹಬ್ಬ ಧಾರ್ಮಿಕ ರೀತಿಯಲ್ಲಿ ಆಚರಿಸಲು ಎಲ್ಲ ದೇವಾಲಯಗಳ ಮುಖ್ಯಸ್ಥರು, ಅರ್ಚಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಅ.10ರಂದು ಜರುಗುವ ದುರ್ಗಾಷ್ಟಮಿ, ಅ.11ರಂದು ನಡೆಯುವ ಮಹಾನವಮಿ ಪೂಜೆ ಹಾಗೂ ಅ.12ರ ವಿಜಯದಶಮಿಯಂದು ಆಚರಿಸುವ ಶಮೀಪೂಜೆ ಹಾಗೂ ಬನ್ನಿಮರ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪುರಾತನ ಪರಂಪರೆ ಮುಂದುವರೆಸಬೇಕು ಎಂದು ಮನವಿ ಮಾಡಿದರು.


ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಮಾತನಾಡಿ, ದಸರಾ ಹಬ್ಬದ ಧಾರ್ಮಿಕ ಆಚರಣೆಗಳು ಪರಂಪರಾಗತವಾಗಿ ಆಚರಿಸಿಕೊಂಡು ಬಂದ ರೀತಿಯಲ್ಲಿ ಸಂಪನ್ನವಾಗಬೇಕು. ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಜಿಲ್ಲಾಡಳಿತದಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದರು.


ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ತುಮಕೂರಿನಲ್ಲಿ ಮೊದಲ ಬಾರಿಗೆ ಆಚರಿಸುತ್ತಿರುವ ದಸರಾ ಉತ್ಸವ ನೆನಪಿನಲ್ಲಿ ಉಳಿಯಬೇಕು. ಯಾವುದೇ ಒಂದು ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಉತ್ಸವದಲ್ಲಿ ಪಾಲ್ಗೊಂಡು ಜಿಲ್ಲೆಯ ಖ್ಯಾತಿಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ ಮಾತನಾಡಿ, ತುಮಕೂರು ದಸರಾ ಉತ್ಸವದ ಧಾರ್ಮಿಕ ಆಚರಣೆಗಳ ವಿಧಿ ವಿಧಾನಗಳ ಬಗ್ಗೆ ಅರ್ಚಕರ ಸಂಘದ ಅಧ್ಯಕ್ಷರು ಹಾಗೂ ಪ್ರತಿನಿಧಿಗಳು ಚರ್ಚಿಸಿ ಅಂತಿಮ ತೀಮಾರ್ನ ಕೈಗೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ನವರಾತ್ರಿ ಸಂದರ್ಭದಲ್ಲಿ ಪ್ರತಿನಿತ್ಯದ ದೇವಿ ಪೂಜೆಗೆ ಅರ್ಚಕರ ತಂಡ ನೇಮಿಸಲು ಹೆಸರನ್ನು ಸೂಚಿಸಬೇಕು. ನಿತ್ಯದ ಪೂಜೆಗೆ ಅಗತ್ಯ ಪೂಜಾ ಸಾಮಗ್ರಿಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗುವುದು ಎಂದರು. ಸಭೆಯಲ್ಲಿ ಮುಜರಾಯಿ ತಹಸೀಲ್ದಾರ್​ ಸವಿತಾ, ಅರ್ಚಕರ ಸಂಘದ ಜಿಲ್ಲಾಧ್ಯಕ್ಷ ರಾಮತೀರ್ಥನ್​, ವಿವಿಧ ದೇವಾಲಯಗಳ ಅರ್ಚಕರು, ಉಪವಿಭಾಗಾಧಿಕಾರಿಗಳಾದ ಗೌರವ್​ ಕುಮಾರ್​ ಶೆಟ್ಟಿ ಹಾಗೂ ಗೋಟೂರು ಶಿವಪ್ಪ, ತಹಸೀಲ್ದಾರ್​ ರಾಜೇಶ್ವರಿ, ವರದರಾಜು, ಶಿರೀನ್​ ತಾಜ್​, ದೇವರಾಯನದುರ್ಗ ದೇವಾಲಯದ ಇಒ ಸುನಿಲ್​, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಜಿ. ಹಿಮಂತರಾಜು, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್​ ಕು ಮಿರ್ಜಿ ಇದ್ದರು.

ಸರ್ಕಾರಿ ಉತ್ಸವವಾಗಿ ದಸರಾ ಆಚರಣೆ


ತುಮಕೂರು: ಸರ್ಕಾರದ ಅನುದಾನದಲ್ಲಿ ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ದಸರಾ ಉತ್ಸವ ಆಚರಿಸಲಾಗುತ್ತಿದೆ ಎಂದು ತುಮಕೂರು ದಸರಾ ಉತ್ಸವ ಸಮಿತಿ ಖಜಾಂಚಿ ಜಿ.ಎಸ್​.ಬಸವರಾಜು ಗಂಭೀರ ಆರೋಪ ಮಾಡಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 33 ವರ್ಷಗಳಿಂದ ತುಮಕೂರು ನಗರದಲ್ಲಿ ದಸರಾ ಉತ್ಸವವನ್ನು ನಾಡಹಬ್ಬದಂತೆ ಆಚರಿಸಿಕೊಂಡು ಬರುತ್ತಿದ್ದ ನಮ್ಮ ತುಮಕೂರು ದಸರಾ ಸಮಿತಿಯನ್ನು ಜಿಲ್ಲಾಡಳಿತವು ಕಡೆಗಣಿಸಿ ಸರ್ಕಾರಿ ದಸರಾ ಉತ್ಸವ ಆಚರಿಸಲು ಹೊರಟಿದೆ.


ಈ ಹಿನ್ನೆಲೆಯಲ್ಲಿ ನಗರದ ಶ್ರೀರಾಮಮಂದಿರದ ಆವರಣದಲ್ಲಿ 10 ದಿನಗಳ ಕಾಲ ದಸರಾ ಉತ್ಸವದ ಧಾರ್ಮಿಕ ಮತ್ತು ಸಾಂಸತಿಕ ವಿಧಿ ವಿಧಾನಗಳು ಹಮ್ಮಿಕೊಂಡಿದ್ದೇವೆ ಎಂದರು. ದಸರಾ ಉತ್ಸವ ಸಮಿತಿ ಪ್ರತಿವರ್ಷ ಒಂದೊಂದು ಸಮುದಾಯ ಸ್ವಾಮೀಜಿಗಳ ನೇತೃತ್ವದಲ್ಲಿ ಶೋಭಾಯಾತ್ರೆ ಮತ್ತು ಸಾಂಸತಿಕ ಉತ್ಸವ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, ಈ ಬಾರಿ ಜಿಲ್ಲಾಡಳಿತವೇ ದಸರಾವನ್ನು ಸರ್ಕಾರಿ ಉತ್ಸವವಾಗಿ ಆಚರಿಸಲು ಮುಂದಾದಾಗ ನಾವುಗಳು ಸಹ ಸ್ವಾಗತಿಸಿ, ಅವರೊಂದಿಗೆ ಸಹಕರಿಸಲು ಮುಂದಾಗಿದ್ದೇವು. ಆದರೆ, ಜಿಲ್ಲಾಡಳಿತ ನಮ್ಮನ್ನು ಕಡೆಗಣಿಸಿ, ಸರ್ಕಾರದ ಅನುದಾನದಲ್ಲಿ ಒಂದು ಪಕ್ಷದ ಕಾರ್ಯಕ್ರಮವಾಗಿ ದಸರಾ ಉತ್ಸವ ಆಚರಿಸಲು ಹೊರಟಿದೆ. ಜಿಲ್ಲಾಡಳಿತದ ಈ ನಿರ್ಧಾರವನ್ನು ಖಂಡಿಸಿ ದಸರಾ ಸಮಿತಿ ಸಂಪ್ರದಾಯಬದ್ಧ ದಸರಾವನ್ನು ಹಮ್ಮಿಕೊಂಡಿದ್ದು, ಶೋಭಾಯಾತ್ರೆಯನ್ನು ಕೈಬಿಟ್ಟು, ಬನ್ನಿಪೂಜೆ, ಸಾಮೂಹಿಕ ಶಮೀಪೂಜೆ ಸೇರಿದಂತೆ ಎಲ್ಲ ವಿಧಿ, ವಿಧಾನಗಳನ್ನು ಶ್ರೀರಾಮಮಂದಿರದ ಆವರಣದಲ್ಲಿ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.


ಜಿಲ್ಲಾಡಳಿತ ನಡೆಸುವ ದಸರಾ ಉತ್ಸವ ಸಮಿತಿಗಳಲ್ಲಿ ಶೇ.90ರಷ್ಟು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಸದಸ್ಯರಾಗಿದ್ದಾರೆ. ಅಲ್ಲದೆ, ಜನಸಾಮಾನ್ಯರಲ್ಲಿ ಸದಸ್ಯರಾಗಿ ಒಂದೇ ಪಕ್ಷದ ವ್ಯಕ್ತಿಗಳನ್ನು ಸದಸ್ಯರಾಗಿ ನೇಮಕ ಮಾಡಿದ್ದಾರೆ. ಸಾಮೂಹಿಕ ಶಮೀಪೂಜೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಶಮೀಪೂಜೆ ಎಂಬುದು ಹಿಂದುಗಳಿಗೆ ಸೇರಿದ್ದು, ಕಳೆದ 33 ವರ್ಷಗಳಿಂದ ಜಿಲ್ಲಾಡಳಿತಕ್ಕೆ ಅನುಧಾನಕ್ಕಾಗಿ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ, ಒಂದು ನಯಾ ಪೈಸೆ ನೀಡಿಲ್ಲ. ಈಗ 2 ಕೋಟಿ ರೂ., ಅನುದಾನ ವೆಚ್ಚ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್​, ದಸರಾ ಕಾರ್ಯನಿರ್ವಾಹಕ ಮಂಡಳಿ ಅಧ್ಯಕ್ಷ ಬಿ.ಎಸ್​.ಮಂಜುನಾಥ್​, ಕಾರ್ಯಾಧ್ಯಕ್ಷ ಡಾ.ಎಸ್​.ಪರಮೇಶ್​ ಮತ್ತಿತರರು ಹಾಜರಿದ್ದರು.

ಕಳೆದ 33 ವರ್ಷಗಳಿಂದ ನಡೆಸಿಕೊಂಡ ಬಂದಿರುವಂತೆ ಈ ಬಾರಿಯೂ ದಸರಾ ಉತ್ಸವ ನಡೆಸಲು ಸರ್ಕಾರಿ ಜೂನಿಯರ್​ ಕಾಲೇಜಿನಲ್ಲಿ ಜಾಗ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೆವು. ಆದರೆ, ಮನವಿ ನೀಡಿ ಮೂರು ತಿಂಗಳು ಕಳೆದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂಬರಹವನ್ನು ನೀಡಿಲ್ಲ. ಜಿಲ್ಲಾಡಳಿತ ನಡೆಡುವ ಉತ್ಸವಕ್ಕೆ ನಮ್ಮ ಬೆಂಬಲವಿದೆ.ಆದರೆ ಧಾರ್ಮಿಕ ವಿಧಿ ವಿಧಾನಗಳ ಶಾಸ್ತ್ರೋಕ್ತವಾಗಿ ನಡೆಯಬೇಕೆಂಬ ಕಾರಣಕ್ಕೆ ಶ್ರೀರಾಮಮಂದಿರದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.| ಕೋರಿ ಮಂಜುನಾಥ್​. ಅಧ್ಯಕ್ಷ, ದಸರಾ ಉತ್ಸವ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net