

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ತಮಗೆ ಮುಟ್ಟಿಲ್ಲ ಎಂದು ಸಾಬೀತು ಪಡಿಸಬೇಕಾದರೆ ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡು ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ಗೆ ಪಾಲು ಸೇರಿದೆ. ಕೇವಲ ಒಂದೂವರೆ ವರ್ಷ ಅಧಿಕಾರಾವಧಿ ಪೂರೈಸುವ ಮೊದಲೇ ಗಂಭೀರ ಸಸ್ವರೂಪದ ಆರೋಪವನ್ನು ಮುಖ್ಯಮಂತ್ರಿಯವರು ಎದುರಿಸುತ್ತಿರುವುದು ರಾಜ್ಯದ ದುರ್ದೈವ ಎಂದರು.
ಈ ಎರಡು ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐ ಗೆ ವಹಿಸಬೇಕು. ತಪ್ಪು ಮಾಡಿಲ್ಲ ಎಂದಾದರೆ ಸಿಬಿಐ ತನಿಖೆಗೆ ಭಯ ಏಕೆ? ತಪ್ಪು ಮಾಡಿಲ್ಲ ಎಂದಾದರೆ ಯಾವ ತನಿಖಾ ಸಂಸ್ಥೆಗೂ ಏನು ಮಾಡಲು ಆಗುವುದಿಲ್ಲ. ನ್ಯಾಯಾಂಗ ತನಿಖೆ ಎಂಬುದು ಭ್ರಷ್ಟಾಚಾರ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಇರುವ ರಹದಾರಿ ಆಗಿದೆ. ಆಯೋಗ ರಚನೆ ಎಂಬುದು 2-3 ವರ್ಷಗಳ ಕಾಲ ಹರಣ ಮಾಡುವ ಗೇಮ್ ಪ್ಲ್ಯಾನ್ ಆಗಿದೆ ಎಂದರು.
ಹಿಂದುಳಿದ ಎಂಬ ಕಾರಣಕ್ಕೆ ಸಿಎಂ ಮೇಲೆ ಟಾರ್ಗೆಟ್ ಮಾಡುವ ಪ್ರಶ್ನೆಯೇ ಇಲ್ಲ. ಇಲ್ಲಿ ಜಾತಿ ತರುವ ಪ್ರಶ್ನೆಯೇ ಇಲ್ಲ. ಸಮಾಜ, ಜಾತಿ ಹೆಸರಿನಲ್ಲಿ ಸಂರಕ್ಷಣೆ ಪಡೆಯುವಂಥದ್ದು ಹೇಡಿತನ. ಯಾವುದೇ ತಪ್ಪು ಮಾಡಿಲ್ಲ ಎಂದು ತನಿಖೆ ಎದುರಿಸಿ. ಭ್ರಷ್ಟಾಚಾರಕ್ಕೆ, ಅಕ್ರಮಕ್ಕೆ ಯಾವುದೇ ಜಾತಿ ಇಲ್ಲ. ಹಿಂದುಳಿದವ, ಮುಂದುಳಿದವ ಯಾರೇ ಇರಲಿ ಎಲ್ಲರಿಗೂ ಒಂದೇ ಕಾನೂನು ಅನ್ವಯ ಆಗುತ್ತದೆ. ರಾಜ್ಯಪಾಲರು ಕಾನೂನು ತಜ್ಞರ ಸಹೆ ಪಡೆದು ಮುಖ್ಯಮಂತ್ರಿಯವರಿಗೆ ನೋಟಿಸ್ ನೀಡಿದ್ದಾರೆ ಎಂದು ಹೇಳಿದರು.
ವರ್ಗಾವಣೆ ಮಾಡುತ್ತೇವೆ ಇಲ್ಲವೇ ಹಣ ಕೊಡು ಎಂದು ಒತ್ತಡ ಹಾಕಿದ್ದಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಯಾದಗಿರಿ ಪಿಎಸ್ಐ ಸಾವು ಸಂಭವಿಸಿದೆ. ಅಲ್ಲಿಯ ಕಾಂಗ್ರೆಸ್ ಶಾಸಕರೊಬ್ಬರು ನಾಪತ್ತೆಯಾಗುತ್ತಾರೆ. ಸಿಎಂ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಎಂಎಲ್ಎಗಳಿಗೆ ಯಾವ ಭಯ ಇಲ್ಲದಂತಾಗಿದೆ ಎಂದರು.
ರಾಜ್ಯದಲ್ಲಿ ಪೋಲಿಸ್ ಆಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಹರಾಜು ಮೂಲಕ ನಡೆಯುತ್ತಿದೆ. ಹೆಚ್ಚು ಬಿಡ್ ಕೂಗಿದವರಿಗೆ ಆಯಾ ಕಟ್ಟಿನ ಸ್ಥಳಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಹಣ ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುವ ಪೊಲೀಸ್ ಅಧಿಕಾರಿಗಳು ಎಲ್ಲ ರೀತಿಯ ಅಪರಾಧಿ ಗುಂಪುಗಳ ಜತೆ ಕಲೆಕ್ಷನ್ಗೆ ನಿಲ್ಲುತ್ತಾರೆ. ರಾಜಕಾರಣಿಗಳಿಗೆ ಕೊಟ್ಟಿದ್ದು ಮರಳಿ ಪಡೆಯಬೇಕಲ್ಲ. ಇದರಲ್ಲಿ ಪೊಲೀಸ್ರ ತಪ್ಪಿಲ್ಲ. ವ್ಯವಸ್ಥೆ ಕೆಟ್ಟಿದೆ. ಅಂಥ ವ್ಯವಸ್ಥೆಯನ್ನು ಕಾಂಗ್ರೆಸ್ ಸೃಷ್ಟಿಸಿದೆ ಎಂದು ಆರೋಪಿಸಿದರು.