

ನರಗುಂದ: ಮಲಪ್ರಭಾ ನೀರಾವರಿ ಅಚ್ಚುಕಟ್ಟು ಪ್ರದೇಶಗಳ ವ್ಯಾಪ್ತಿಯಲ್ಲಿ ಕಾಲುವೆಗಳ ನಿರ್ವಣಕ್ಕೆ 1976ರಲ್ಲಿ ರೈತರ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಅವೈಜ್ಞಾನಿಕ ಕಾಲುವೆಗಳ ನಿರ್ವಣಕ್ಕೆ ಸಾವಿರಾರು ಹೆಕ್ಟೇರ್ ಜಮೀನು ಭೂಸ್ವಾಧೀನ ಪಡಿಸಿಕೊಂಡಿರುವುದನ್ನು ನೀರಾವರಿ ನಿಗಮದ ಉನ್ನತ ಮಟ್ಟದ ಅಧಿಕಾರಿಗಳು, ರೈತರು, ವಿಶೇಷ ಭೂಸ್ವಾಧೀನಾಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತಸಂಘ ಉಪಾಧ್ಯಕ್ಷ ಬಿ.ಎಸ್. ಸೊಪ್ಪಿನ ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕ ನೀರಾವರಿ ನಿಗಮದಿಂದ ಕಾಲುವೆಗಳ ನಿರ್ವಣಕ್ಕೆ ಅವೈಜ್ಞಾನಿಕವಾಗಿ ಭೂಮಿ ಸ್ವಾಧೀನಪಡಿಕೊಂಡಿರುವ ಕುರಿತು ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಕರೆದಿದ್ದ ತಾಲೂಕಿನ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ನವಿಲುತೀರ್ಥ ಜಲಾಶಯದಿಂದ ಸವದತ್ತಿ, ನರಗುಂದ, ನವಲಗುಂದ, ರಾಮದುರ್ಗ, ಬಾದಾಮಿ ತಾಲೂಕಿನ ವಿವಿಧ ಗ್ರಾಮಗಳ 5 ಲಕ್ಷ 11 ಸಾವಿರ ಎಕರೆ ರೈತರ ಜಮೀನುಗಳಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಜಾರಿಗೊಳಿಸಿಕೊಡುವ ಸದುದ್ದೇಶದಿಂದ ಫಲವತ್ತಾದ ಜಮೀನುಗಳನ್ನು ಕಾಲುವೆ ನಿರ್ವಣಕ್ಕೆ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಕಾಲುವೆಗಳ ನಿರ್ವಣಕ್ಕೆ ಜಮೀನು ನೀಡಿದ ರೈತರಿಗೆ ನೋಟಿಸ್ ಕೊಡಲಾಗಿತ್ತು. ಆದರೆ, ಎಂ.ಆರ್. ಪಹಣಿ ಪತ್ರಿಕೆಯಲ್ಲಿ ಜಮೀನು ಭೂಸ್ವಾಧೀನ ಪ್ರಕ್ರಿಯೆ ಮಾಡಿಕೊಂಡಿರುವ ಬಗ್ಗೆ ಯಾವುದೇ ಉಲ್ಲೇಖ ನೋಂದಣಿ ಮಾಡಿಲ್ಲ. ಪರಿಣಾಮ ಅವೈಜ್ಞಾನಿಕ ಕಾಲುವೆಗಳನ್ನು ನಿರ್ವಿುಸಿ ಸುದೀರ್ಘ 50 ವರ್ಷಗಳು ಗತಿಸಿದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಮಾಡಿಕೊಂಡಿರುವ ಕುರಿತು ಪಹಣಿ ಪತ್ರಿಕೆಗಳಲ್ಲಿ ಉಲ್ಲೇಖ ನೀಡಲಾಗುತ್ತಿದೆ. ಕಾಲುವೆಗಳ ನಿರ್ವಣಕ್ಕೆ ಜಮೀನು ಭೂಸ್ವಾಧೀನ ಮಾಡಿಕೊಂಡಿರುವುದಕ್ಕೆ ರೈತರ ತಕರಾರುಗಳಿಲ್ಲ. ಆದರೆ, ಸರ್ಕಾರ, ಕಂದಾಯ ನೀರಾವರಿ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ 50 ವರ್ಷದ ಬಳಿಕ ಮತ್ತೆ ನೋಟಿಸ್ ನೀಡಿ ಭೂಸ್ವಾಧೀನ ಪ್ರಕ್ರಿಯೆ ಮಾಡಿಕೊಂಡಿರುವುದರ ಬಗ್ಗೆ ಉಲ್ಲೇಖ ನೀಡುತ್ತಿರುವುದು ರೈತರ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು.
ವಾಸ್ತವದಲ್ಲಿ ಟೇಲ್ಯಾಂಡ್ ಭಾಗದ ರೈತರ ಜಮೀನುಗಳಲ್ಲಿ ಕಾಲುವೆಗಳನ್ನೇ ನಿರ್ವಿುಸಿಲ್ಲ. ನೀರು ಕೂಡ ಬರುವುದಿಲ್ಲ. ಹೀಗಿದ್ದರೂ ರೈತರ ಪಹಣಿ ಪತ್ರಿಕೆಗಳಲ್ಲಿ ನೀರಾವರಿ ಕಾಲುವೆ ನಿರ್ವಣಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ನಮೂದಾಗಿಸಲಾಗಿದೆ. ಇದರಿಂದ ಈಗಾಗಲೇ ಜಮೀನುಗಳ ಹಂಚಿಕೆ ಮಾಡಿಕೊಂಡಿರುವ ಸಹೋದರರ ಮಧ್ಯೆ ಪರಸ್ಪರ ವಾಗ್ವಾದ, ಕಲಹಗಳು ಉಂಟಾಗಿದೆ. ಅಲ್ಲದೆ, ಕೆಲವರು ಈಗಾಗಲೇ ಜಮೀನು ಮಾರಾಟ ಮಾಡಿದ ಭೂ-ಮಾಲೀಕರು, ಖರೀದಿದಾರರ ಮಧ್ಯೆ ಗಲಾಟೆಗಳು ಉಂಟಾಗುತ್ತಿವೆ. ಪಹಣಿ ಪತ್ರಿಕೆಗಳಲ್ಲಿ ಈಗ ಭೂಸ್ವಾಧೀನ ಬಗ್ಗೆ ನೋಂದಣಿ ಮಾಡುತ್ತಿರುವ ಮೂಲ ಜಮೀನುಗಳ ಪೈಕಿ ಕಡಿಮೆ ಜಮೀನಿಗೆ ಬೆಳೆ ವಿಮೆ, ಬೆಳೆ ಹಾನಿ, ಬೆಳೆ ಸಾಲ ಮುಂತಾದ ಸರ್ಕಾರಿ ಯೋಜನೆಗಳ ಪ್ರಯೋಜನ ದೊರೆಯದಂತಾಗಿದೆ. ಈ ಬಗ್ಗೆ 2023ರಲ್ಲಿ ಗದಗ ಜಿಲ್ಲಾ ಉಪವಿಭಾಗಾಧಿಕಾರಿಗಳಿಗೆ ನರಗುಂದ ತಾಲೂಕಿನ 23 ರೈತರು ಲಿಖಿತ ಅರ್ಜಿ ಸಲ್ಲಿಸಿ ಸಮಸ್ಯೆ ಇತ್ಯರ್ಥಕ್ಕೆ ಮನವಿ ಮಾಡಿದ್ದರು. ಅಂತಿಮ ವಿಚಾರಣೆ ಬಳಿಕ ರೈತರ ಪಹಣಿಯಲ್ಲಿ ನೀರಾವರಿ ನಿಗಮಕ್ಕೆ ಕಡಿತಗೊಂಡ ಜಮೀನಿನ ಲೋಪದೋಷ ಸರಿಪಡಿಸಿದ್ದಾರೆ. ಅದರಂತೆಯೇ ಇನ್ನುಳಿದ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಸಮಸ್ಯೆ ಸರಿಪಡಿಸಿಕೊಡಬೇಕು. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಾಂತ ರೈತ ಸಂಘದ ತಾಲೂಕು ಸಂಚಾಲಕ ಎಚ್.ಎನ್. ಹಳಕಟ್ಟಿ, ವೆಂಕಣ್ಣ ರಾಯರಡ್ಡಿ, ಇತರರಿದ್ದರು.