

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ಲಾಸ್ಟಿಕ್ ಬಳಕೆಯಿಂದ ನೀರು, ಜಲಚರ, ವಾಯು ಮತ್ತು ಮಾನವ ಜೀವಿಗಳಿಗೆ ದುಷ್ಪರಿಣಾಮ ಉಂಟಾಗುತ್ತವೆ. ಪ್ಲಾಸ್ಟಿಕ್ ಮಿಶ್ರಿತ ಆಹಾರ ಸೇವನೆಯಿಂದ ಅಪಾಯ ನಿಶ್ಚಿತ. ಪ್ಲಾಸ್ಟಿಕ್ ಕೊಳೆಯಲು ಸಾವಿರಾರು ವರ್ಷ ಬೇಕು. ಹೀಗಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ವಾಲ್ಮಿಯ ಸಮಾಲೋಚಕ ಡಾ. ವಿ.ಐ. ಬೆಣಗಿ ಹೇಳಿದರು.
ಪರಿಸರ ದಿನ ನಿಮಿತ್ತ ನಗರ ವಾಲ್ಮಿಯಲ್ಲಿ ಸೋಮವಾರ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪ್ಲಾಸ್ಟಿಕ್ ಒಂದು ಆಕಸ್ಮಿಕ ಆವಿಷ್ಕಾರ. ಅಮೆರಿಕದ ವಿಜ್ಞಾನಿಯೊಬ್ಬರು ಬೇರೆ ಏನನ್ನೋ ಸಂಶೋಧನೆ ಮಾಡಲು ಹೊರಟಾಗ ಆಕಸ್ಮಿಕವಾಗಿ ಸಂಶೋಧನೆಯಾದ ವಸ್ತು ಇದು. ಆದರೆ ಇದರ ಅತಿ ಬಳಕೆ ಇಂದು ಪರಿಸರಕ್ಕೆ ಮಾರಕವಾಗುತ್ತಿದೆ ಎಂದರು.
ಈ ವರ್ಷದ ಧ್ಯೇಯೋದ್ದೇಶ ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟೋಣ’ ಎಂಬುದು. ಪ್ಲಾಸ್ಟಿಕ್ ಬಳಕೆಯಿಂದ ಮಾನವ ಸಂಕುಲಕ್ಕೆ ಅಪಾಯವಿದ್ದು, 50 ವರ್ಷಗಳ ಬಳಿಕವೂ ನಾವು ಅರ್ಥ ಮಾಡಿಕೊಳ್ಳದಿರುವುದು ವಿಷಾದಕರ ಸಂಗತಿ. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಸಾಧ್ಯವಿಲ್ಲವಾದರೂ ಎಚ್ಚೆತ್ತು ಕಡಿಮೆ ಬಳಸಿ ಪರಿಸರ ರಕ್ಷಣೆಯಲ್ಲಿ ತೊಡಗಬೇಕು ಎಂದರು.
ಪ್ರೊ.ಬಿ.ವೈ. ಬಂಡಿವಡ್ಡರ ಮಾತನಾಡಿದರು. ವಾಲ್ಮಿ ಸಹಾಯಕ ನಿರ್ದೇಶಕ ಪ್ರಭಾಕರ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಸುವರ್ಣಾ ದೊಡ್ಡಮನಿ, ಇತರರು ಇದ್ದರು. ಪರಿಸರ ರಕ್ಷಣೆ ಕುರಿತ ಪ್ರತಿಜ್ಞೆ ಕುರಿತು ಸುರೇಶ ಕುಲಕರ್ಣಿ ಪ್ರಮಾಣವಚನ ಬೋಧಿಸಿದರು. ಮೇಘನಾ ನಾಡಿಗೇರ ಸ್ವಾಗತಿಸಿದರು. ಇಂದೂಧರ ಹಿರೇಮಠ ನಿರೂಪಿಸಿದರು. ಬಸವರಾಜ ಪೂಜಾರ ವಂದಿಸಿದರು.