

ಕೆ.ಆರ್.ನಗರ: ಕರ್ನಾಟಕ ರಾಜ್ಯ ಏಕೀಕರಣವಾಗಿ 50 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸೋಣ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ತಾಲೂಕು ನಾಡಹಬ್ಬಗಳ ಸಮಿತಿಯ ವತಿಯಿಂದ ಬುಧವಾರ ಕರೆಯಲಾಗಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಎಲ್ಲರ ಸಲಹೆಗಳನ್ನು ಪಡೆದು ಮಾತನಾಡಿದ ಅವರು, ಕನ್ನಡ ತೇರು ಎಳೆಯಲು ಎಲ್ಲರೂ ಕೈಜೋಡಿಸಬೇಕು. ಸಾಧ್ಯವಾದಷ್ಟು ಎಲ್ಲ ಇಲಾಖೆಯವರು ಆಕರ್ಷಕ ಸ್ತಬ್ಧಚಿತ್ರ ಮಾಡಿಬೇಕು. ಈ ಬಗ್ಗೆ ಮೂರು ದಿನ ಮುಂಚಿತವಾಗಿ ನನಗೆ ವರದಿ ನೀಡಬೇಕೆಂದು ಸೂಚಿಸಿದರು.
ನ.1ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದ ಕೃಷ್ಣರಾಜೇಂದ್ರ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಿಂದ ತಾಯಿ ಭುವನೇಶ್ವರಿಯ ಭಾವಚಿತ್ರ, ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದ ಹಿಂದುಳಿದ ವರ್ಗಗಳ ನಾಯಕ ದಿವಂಗತ ಡಿ.ದೇವರಾಜ ಅರಸು ಮತ್ತು ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿದ ನಗರದ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ರಾಜ್ಯೋತ್ಸವದ ಅಂಗವಾಗಿ ಪ್ರತಿಯೊಂದು ಸರ್ಕಾರಿ ಕಚೇರಿಗಳಿಗೂ ಕಡ್ಡಾಯವಾಗಿ ದೀಪಾಲಂಕಾರ ಮಾಡಿ ಆಚರಣೆಯ ಮೆರುಗು ಹೆಚ್ಚಿಸಬೇಕು. ರಸ್ತೆ ಬದಿಯಲ್ಲಿ ಅಂದವಾದ ರಂಗೋಲಿ ಬಿಡಿಸುವ ಮೂರು ಮಹಿಳೆಯರಿಗೆ ನಗದು ಬಹುಮಾನ ಮತ್ತು ಪಾರಿತೋಷಕ ನೀಡಲಾಗುತ್ತದೆ ಎಂದು ಪ್ರಕಟಿಸಿದರು. ಅಂದು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ವ್ಯವಹರಿಸಬೇಕು ಮತ್ತು ಪಟ್ಟಣದ ಎಲ್ಲ ಬ್ಯಾಂಕುಗಳಿಗೆ ಪತ್ರ ಬರೆದು ಕನ್ನಡಕ್ಕೆ ಆದ್ಯತೆ ನೀಡುವಂತೆ ಸೂಚನೆ ನೀಡಬೇಕು ಎಂದು ತಹಸೀಲ್ದಾರ್‌ಗೆ ಸೂಚನೆ ನೀಡಿದರು.
ಕನ್ನಡ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಗೆ ಆಗಮಿಸದ ತಾಲೂಕು ಮಟ್ಡದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಸೀಲ್ದಾರ್ ಜೆ.ಸುರೇಂದ್ರಮೂರ್ತಿ ಅವರಿಗೆ ಶಾಸಕ ಡಿ.ರವಿಶಂಕರ್ ಸೂಚಿಸಿದರಲ್ಲದೇ ಸಭೆಗೆ ಗೈರಾದವರ ವಿರುದ್ಧ್ದ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು. ಅಧಿಕಾರಿಗಳ ಚಾಳಿ ಇದೇ ರೀತಿ ಮುಂದುವರಿದರೆ ಅಂತಹವರಿಗೆ ತಾಲೂಕಿನಿಂದ ಗೇಟ್ ಪಾಸ್ ನೀಡುವುದಾಗಿ ಎಚ್ಚರಿಸಿದರು. ರಾಷ್ಟ್ರೀಯ ಹಬ್ಬ ಮತ್ತು ನಾಡಹಬ್ಬಗಳ ಪೂರ್ವಭಾವಿ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು, ಕಾರ್ಯಕ್ರಮ ಮತ್ತು ಮೆರವಣಿಗೆಯಲ್ಲಿ ಕಚೇರಿಯ ಎಲ್ಲ ಸಿಬ್ಬಂದಿ ಉಪಸ್ಥಿತರಿರಬೇಕೆಂದು ತಾಕೀತು ಮಾಡಿದರು.
ತಹಸೀಲ್ದಾರರಾದ ಜೆ.ಸುರೇಂದ್ರಮೂರ್ತಿ, ನರಗುಂದ್, ತಾಪಂ ಇಒ ವಿ.ಪಿ.ಕುಲದೀಪ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಬಿಇಒ ಆರ್.ಕೃಷ್ಣಪ್ಪ, ಸಿಪಿಐ ಶಿವಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್, ನಗರಾಧ್ಯಕ್ಷ ಸಿ.ವಿ.ಮೋಹನಕುಮಾರ್, ಜಿಪಂ ಮಾಜಿ ಸದಸ್ಯರಾದ ಜಯರಾಮೇಗೌಡ, ಜಿ.ಆರ್.ರಾಮೇಗೌಡ, ಪುರಸಭೆ ಮಾಜಿ ಅಧ್ಯಕ್ಷೆ ಗೀತಾಮಹೇಶ್, ಸದಸ್ಯ ನಟರಾಜು, ಗ್ಯಾರಂಟಿ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಉದಯಶಂಕರ್, ಎಂ.ಎಸ್.ಮಹದೇವ್, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಮುಖಂಡರಾದ ಚೀರ‌್ನಹಳ್ಳಿ ಸಿ.ಪಿ.ಶಂಕರ್, ರಾಜಯ್ಯ, ತಿಮ್ಮಶೆಟ್ಟಿ ಮತ್ತಿತರರು ಇದ್ದರು.