ಮಹನೀಯರ ಜಯಂತಿ ಅರ್ಥಪೂರ್ಣವಾಗಿ ಆಚರಿಸೋಣ

Let's celebrate the great Jayanti meaningfully
ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹನೀಯರ ಜಯಂತಿ ಹಿನ್ನೆಲೆಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿದರು. ಜಿ.ಪಂ. ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಡಿಸಿ ಸೋಮಲಿಂಗ ಗೆಣ್ಣೂರ ಇದ್ದಾರೆ.
Published on

ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಬರುವ ಏ. 5 ರಂದು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಹಾಗೂ ಏ. 14 ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ ಜಯಂತ್ಯುತ್ಸವ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಯಿತು.

ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಏ. 5 ರಂದು ಡಾ. ಬಾಬು ಜಗಜೀವನರಾಂ ಅವರ 118ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ನಗರದ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿಯ ಡಾ. ಬಾಬು ಜಗಜೀವನರಾಂ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಬೆಳಗ್ಗೆ 9ಕ್ಕೆ ವಿವಿಧ ಕಲಾತಂಡಗಳ ಜತೆಗೆ ಮಹನೀಯರ ಭಾವಚಿತ್ರದ ಮೆರವಣಿಗೆ ನಡದು ವಿವಿಧ ವೃತ್ತಗಳಲ್ಲಿ ಸಂಚರಿಸಿ ಕಂದಗಲ್ಲ ಹನಮಂತರಾಯ ರಂಗಮಂದಿರ ಸೇರಲಿದೆ.

ನಂತರ ರಂಗಮಂದಿರದಲ್ಲಿ ಜಯಂತಿ ಅಂಗವಾಗಿ ಸಭಾ ಕಾರ್ಯಕ್ರಮ ಆಯೋಜಿಸಿ ಜಗಜೀವನರಾಂ ಅವರ ಜೀವನ ಚರಿತ್ರೆ ಹಾಗೂ ಸಾಧನೆ ಕುರಿತು ಉಪನ್ಯಾಸ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಓರ್ವ ಪ್ರಗತಿಪರ ರೈತನ್ನು ಗುರುತಿಸಿ ಸನ್ಮಾನಿಸಲು ತೀರ್ಮಾನಿಸಲಾಯಿತು.

ಏ. 14 ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ 134ನೇ ಜಯಂತಿ ಅಂಗವಾಗಿ ಅಂದು ಬೆಳಗ್ಗೆ 9ಕ್ಕೆ ನಗರದ ಬುದ್ಧ ವಿಹಾರದಿಂದ ವಿವಿಧ ಕಲಾ ತಂಡಗಳ ಮೂಲಕ ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಕಂದಗಲ್ಲ ಹನಮಂತರಾಯ ರಂಗ ಮಂದಿರದಲ್ಲಿ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಜಯಂತಿಯಲ್ಲಿ ಉಪನ್ಯಾಸ ಏರ್ಪಡಿಸುವುದು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲು ಹಾಗೂ ಮಹನೀಯರ ಜೀವನಾಧಾರಿತ ನೃತ್ಯ ರೂಪಕ ಪ್ರಸ್ತುತಪಡಿಸಲು ನಿರ್ಣಯಿಸಲಾಯಿತು.

ಜಯಂತಿ ಅಂಗವಾಗಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಆಯೋಜಿಸಿ ಆಯಾ ಜಯಂತಿ ದಿನಗಳಂದು ನಗರದಲ್ಲಿರುವ ವಿವಿಧ ವೃತ್ತಗಳಿಗೆ ದೀಪಾಲಂಕಾರ, ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ ವೇದಿಕೆ ಅಲಂಕಾರ, ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಣ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳುವಂತೆಯೂ ಹಾಗೂ ಮಹನೀಯರ ಜಯಂತಿ ದಿನ ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸುವಂತೆ ಅವರು ಸೂಚನೆ ನೀಡಲಾಯಿತು.

ಜಿ.ಪಂ. ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲೀಕ ಮಾನವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net