

ವಿಜಯಪುರ: ಮಹಾತ್ಮರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ. ಅದಕ್ಕಾಗಿ ಈಗನಿಂದಲೇ ಸಕಲ ಸಿದ್ಧತೆ ಕೈಗೊಳ್ಳಲು ಸರ್ವರ ಸಲಹೆ ಮತ್ತು ಸಹಕಾರ ಅವಶ್ಯಕ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಾಜಿ ಸಿಎಂ ಡಿ.ದೇವರಾಜ್ ಅರಸು ಜನ್ಮ ದಿನಾಚರಣೆ, ನುಲಿಯ ಚಂದಯ್ಯ ಜಯಂತಿ, ಬ್ರಹ್ಮರ್ಶಿ ನಾರಾಯಣಗುರು ಜಯಂತಿ ಮತ್ತು ಶ್ರೀಕೃಷ್ಣ ಜಯಂತಿ ಆಚರಣೆ ಹಿನ್ನೆಲೆ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಡಿ.ದೇವರಾಜ್ ಅರಸು ಅವರ 109ನೇ ಜನ್ಮ ದಿನಾಚರಣೆ ಅಂಗವಾಗಿ ಅಂದು ಬೆಳಗ್ಗೆ 9.30ಕ್ಕೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಡಿ.ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆಯನ್ನು ವಿವಿಧ ಕಲಾ ತಂಡಗಳೊಂದಿಗೆ ನಗರದ ವಿವಿಧ ವೃತ್ತಗಳಲ್ಲಿ ಸಂಚರಿಸಿ ಕಂದಗಲ್ಲ ಹನುಮಂತರಾಯ ರಂಗ ಮಂದಿರಕ್ಕೆ ಆಗಮಿಸಿ, ರಂಗ ಮಂದಿರದಲ್ಲಿ ಜಯಂತಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
ಜಯಂತಿ ಕಾರ್ಯಕ್ರಮದಲ್ಲಿ 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗದ ಇಲಾಖೆಯ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡಿರುವ ನಿಲಯಾರ್ಥಿಗಳಿಗೆ ಸನ್ಮಾನಿಸಲು ತೀರ್ಮಾನಿಸಲಾಯಿತು. ಇದರಿಂದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.
ಆ. 19 ರಂದು ನುಲಿಯ ಚಂದಯ್ಯ ಜಯಂತಿ ಆಚರಣೆ, ಆ.20ರಂದು ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ಆ. 26 ರಂದು ಶ್ರೀಕೃಷ್ಣ ಜಯಂತಿ ಆಚರಿಸಲಾಗುತ್ತಿದ್ದು, ತನ್ನಿಮಿತ್ತ ಭಾವಚಿತ್ರ ಮೆರವಣಿಗೆ, ವಿಶೇಷ ಉಪನ್ಯಾಸ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಈರಣ್ಣ ಆಶಾಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಅರವಿಂದ ಹಿರೊಳ್ಳಿ, ವಿದ್ಯಾವತಿ ಅಂಕಲಗಿ, ಮಲ್ಲು ಬಿದರಿ, ಸೋಮನಾಥ ಕಳ್ಳಿಮನಿ, ಅಡಿವೆಪ್ಪ ಸಾಲಗಲ್ಲ, ಭೀಮರಾಯ ಜಿಗಜಿಣಗಿ, ದೇವೇಂದ್ರ ಮೇರೆಕರ್, ಸೋಮನಗೌಡ ಕಲ್ಲೂರ, ಗಿರೀಶ ಕುಲಕರ್ಣಿ, ಸಿದ್ದು ರಾಯಣ್ಣನವರ, ಶ್ರೀನಿವಾಸ್ ಬೆಟಿಗೇರಿ, ಕೆ.ಎಚ್. ಭಜಂತ್ರಿ, ಗುರು ಕನ್ನೂರ, ಪ್ರಭಾಕರ ಈಳಗೇರ ಮತ್ತಿತರರಿದ್ದರು.