

ಹರಿಹರ: ದಸರಾ ಮಹೋತ್ಸವ ಸಮಿತಿಯಿಂದ ಈ ಬಾರಿ ನಡೆಯುವ ನಾಡಹಬ್ಬ ದಸರಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಶಾಸಕ ಬಿ.ಪಿ.ಹರೀಶ್ ಸಲಹೆ ನೀಡಿದರು.
ನಗರದ ಶ್ರೀ ಓಂಕಾರ ಮಠದಲ್ಲಿ ಭಾನುವಾರ ದಸರಾ ಮಹೋತ್ಸವ ಸಮಿತಿ ಹಮ್ಮಿಕೊಂಡಿದ್ದ ದಸರಾ ಹಬ್ಬದ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾದರು.
ದಸರಾ ಮಹೋತ್ಸವ ಸಮಿತಿಯವರು ಪ್ರತಿ ವರ್ಷ ದಸರಾ ಹಬ್ಬವನ್ನು ಹಲವು ಪೂಜಾ ವಿಧಾನಗಳ ಕಾರ್ಯಕ್ರಮ ಆಯೋಜಿಸುವ ಜತೆಗೆ ಬನ್ನಿ ಮುಡಿಯುವ ದಿನದಂದು ಅಂಬಾರಿ ಮೆರವಣಿಗೆ ಮೂಲಕ ತಾಲೂಕಿನಲ್ಲಿ ಹಬ್ಬದ ಮೆರುಗನ್ನು ಹೆಚ್ಚಿಸಲಿದೆ ಎಂದರು.
ಬಹುತೇಕ ಭಕ್ತರು ರಸ್ತೆಬದಿ ನಿಂತು ನೋಡುವ ಬದಲು ಮೆರವಣಿಗೆಯಲ್ಲಿ ಪಾಲ್ಗೊಂಡರೆ ಶೋಭಾಯಾತ್ರೆ ಅರ್ಥಪೂರ್ಣವಾಗಿ ಆಚರಿಸಿದಂತಾಗುತ್ತದೆ ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ಶಂಕರ್ ಕಟಾವ್ಕರ್ ಮಾತನಾಡಿ, ಕಳೆದ 20 ವರ್ಷಗಳಿಂದ ಧಾರ್ಮಿಕ ವಿಧಾನಗಳೊಂದಿಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಗರದ ಸಾರ್ವಜನಿಕರ ಸಹಕಾರದಿಂದ ಅದ್ದೂರಿಯಾಗಿ ಆಚರಿಸುತ್ತ ಬರಲಾಗುತ್ತಿದೆ ಎಂದರು.
ಈ ಬಾರಿಯ 21ನೇ ದಸರಾ ಉತ್ಸವವು ಅ. 03 ರಿಂದ ಅ. 12 ರವರಗೆ ನಡೆಯಲಿದೆ. ಅ. 12ಕ್ಕೆ ಸಾಮೂಹಿಕ ಬನ್ನಿ ಹಾಗೂ ಅದ್ದೂರಿ ಅಂಬಾರಿ ಮೆರವಣಿಗೆ ಇದೆ. ನಗರದ ಎಲ್ಲ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ಕೋರಿಕೊಂಡರು.
ಮೈಸೂರು, ಕೊಡಗಿನ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದಂತೆ ಹರಿಹರದ ದಸರಾ ಮಹೋತ್ಸವಕ್ಕೆ ಹಣ ಬಿಡುಗಡೆ ಮಾಡಿಸಲು ಪಕ್ಷಭೇದ ಮರೆತು ಸಹಕರಿಸಿ ಎಂದು ಈ ವೇಳೆ ವೇದಿಕೆಯಲ್ಲಿದ್ದ ರಾಜಕೀಯ ಮುಖಂಡರಿಗೆ ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಕವಿತಾ ಬೇಡರ, ಬಿಜೆಪಿ ಮುಖಂಡ ಎಸ್.ಎಂ.ವೀರೇಶ್ ಹನಗವಾಡಿ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಸಿ.ಎಸ್.ಹುಲಿಗೇಶ್, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ ಇತರರು ಮಾತನಾಡಿ, ದಸರಾ ಮಹೋತ್ಸವ ಸಮಿತಿಯವರು ಪ್ರತಿ ವರ್ಷ ಅಚ್ಚುಕಟ್ಟಾಗಿ ಧಾರ್ಮಿಕ ವಿಧಿ ವಿಧಾನ ಪಾಲಿಸುತ್ತಿದ್ದು, ತಾಲೂಕಿಗೆ ಮೆರುಗು ತಂದಿದೆ. ಈ ಬಾರಿಯೂ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.
ನಗರಸಭೆ ಉಪಾಧ್ಯಕ್ಷ ಜಂಬಣ್ಣ, ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ, ಟಿ.ಜೆ. ಮುರುಗೇಶಪ್ಪ, ಅಜಿತ್‌ಸಾವಂತ್, ಶಿವಪ್ರಕಾಶ್ ಶಾಸ್ತ್ರಿ, ಪ್ರಕಾಶ್ ಕೋಳೂರು, ರಮೇಶ್ ನಾಯ್ಕ, ಅಮರಾವತಿ ರೇವಣಸಿದ್ದಪ್ಪ, ನಾರಾಯಣ ಜೋಯಿಸರು, ಅಂಬಾಸ ಹಂಸಾಗರ, ಮಾಲತೇಶ್ ಭಂಡಾರಿ, ಪರಶುರಾಮ ಕಾಟ್ವೆ, ಪ್ರಕಾಶ್ ಶೆಟ್ಟಿ, ಶ್ರೀನಿವಾಸ್ ಮೆಹರ‌್ವಾಡೆ, ರೆಡ್ಡಿ ಹನುಮಂತಪ್ಪ, ಡಾ.ರಾಮಪ್ರಸಾದ ಕುಲಕರ್ಣಿ, ರೂಪಾ ಶಶಿಕಾಂತ್, ಸಾಕ್ಷಿ ಶಿಂಧೆ, ರೂಪಾ ಕಾಟ್ವೆ, ಅಮಿತಾ, ಮಂಜುಳಾ ಅಗಡಿ ಇತರರಿದ್ದರು.