

ಹುನಗುಂದ: ತಂಬಾಕು ಸೇವನೆ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರೂ ತಂಬಾಕು ಮುಕ್ತ ಸಮಾಜ ನಿರ್ಮಿಸಲು ಶ್ರಮಿಸಬೇಕು ಎಂದು ಅಪರ ದಿವಾಣಿ ನ್ಯಾಯಾಧೀಶ ಮಹಾಂತೇಶ ಮಠದ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ನಡೆದ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹುನಗುಂದ ಇಳಕಲ್ಲ ತಾಲೂಕು ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂಬಾಕು ಮತ್ತು ಸಿಗರೇಟ್ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ. ಆದ್ದರಿಂದ ತಂಬಾಕು ಸೇವನೆಯನ್ನು ಪ್ರತಿಯೊಬ್ಬರೂ ತ್ಯಜಿಸಬೇಕೆಂದು ತಿಳಿಸಿದರು.
ತಾಪಂ ಇಒ ಮುರಳೀಧರ ದೇಶಪಾಂಡೆ ಮಾತನಾಡಿ, ದುಶ್ಚಟಕ್ಕೆ ಒಳಗಾಗದೆ ಅಮೂಲ್ಯವಾದ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕು ಎಂದರು.
ವಕೀಲ ಮಹಾಂತೇಶ ಅವಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ತಂಬಾಕು ಸೇವನೆಯಿಂದ ದುಶ್ವಟಕ್ಕೆ ಒಳಗಾಗಿ ಕ್ಯಾನ್ಸರ್‌ಗೆ ಗುರಿಯಾಗುತ್ತಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಎಂ.ಎ. ಸಂಗಮಕರ, ಆರ್. ಬಾಬು ಇದ್ದರು.