

ವಿಜಯವಾಣಿ ಸುದ್ದಿಜಾಲ ಧಾರವಾಡ
ವಚನಗಳಿಗೆ ರಾಗ ಸಂಯೋಜಿಸಿ ವಚನ ಗಾಯನ ಪರಂಪರೆಗೆ ನಾಂದಿ ಹಾಡಿದ ಶ್ರೇಯಸ್ಸು ಗಾನಯೋಗಿ ಪಂಚಾಕ್ಷರ ಗವಾಯಿಗಳಿಗೆ ಸಲ್ಲುತ್ತದೆ. ಇಂತಹ ಮಹಾನ್ ಪುರುಷರ ಸ್ಮಾರಕವನ್ನು ಧಾರವಾಡದಲ್ಲಿ ನಿರ್ಮಿಸಬೇಕು ಎಂದು ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ವೇ. ಚನ್ನವಿರಸ್ವಾಮಿ ಹಿರೇಮಠ (ಕಡಣಿ) ಹೇಳಿದರು.
ನಗರದ ರಂಗಾಯಣದ ಸುವರ್ಣ ಸಾಂಸತಿಕ ಸಮುಚ್ಚಯದಲ್ಲಿ ಗದಗನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಇತ್ತೀಚೆಗೆ ಏರ್ಪಡಿಸಿದ್ದ ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳ ಪುಣ್ಯಸ್ಮರಣೆ, ಗುರು ಗುಣಗಾನ ಕವಿಗೋಷ್ಠಿ, ಕಾವ್ಯಗಾಯನ ಮತ್ತು ನೃತ್ಯ ನಮನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೃಣಾಲ ಜೋಶಿ ಮಾತನಾಡಿ, ಗುರು ಪಂಚಾಕ್ಷರ ಗವಾಯಿಗಳು ಅಸಾಮಾನ್ಯ ಸಾಧನೆ ಮಾಡಿದ ಮಹಾನ್ ಚೇತನ. ನಮ್ಮ ಜೀವನದಲ್ಲಿ ಇಂತಹ ಸಾಧಕರ ತತ್ವ, ಆಚರಣೆ ಅಳವಡಿಸಿಕೊಂಡು ಗವಾಯಿಗಳನ್ನು ಮನೆ ಮನೆಗೆ ಕರೆದೊಯ್ಯಬೇಕು ಎಂದರು.
ಪ್ರಕಾಶ ಬಾಳಿಕಾಯಿ, ಡಾ.ಎ.ಎಲ್. ದೇಸಾಯಿ ಮಾತನಾಡಿದರು. ಡಾ. ಸುರೇಶ ಕಳಸಣ್ಣವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳು ಕವನದ ಮೂಲಕ ಗುರು ಗುಣಗಾನ ಮಾಡಿದರು. ಶ್ರೀಗುರು ಪುಟ್ಟರಾಜ ಸಂಗೀತ ಶಾಲೆ, ವೀರಶೈವ ಜಾಗೃತಿ ಮಹಿಳಾ ಸಮಿತಿ ಸದಸ್ಯರು ಸಂಗೀತ ನಮನ ಸಲ್ಲಿಸಿದರು. ಮಾಸ್ಟರ್ ಸಾತ್ವಿಕ್ ಜಿ. ಮಹಾಮನೆ ವಯೋಲಿನ್ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಸುರೇಶ ನಿಡಗುಂದಿ, ಸದಾನಂದ ತಾವಡೆ ಹಾಮೋರ್ನಿಯಂ ಸಾಥ್ ನೀಡಿದರು.
ಡಾ. ಸುಮಾ ಹಡಪದ, ದೇವಿಕಾ ಜೋಗಿ ಹೊಸಪೇಟೆ, ಡಾ. ಸುರೇಶ ಕಳಸಣ್ಣವರ, ಇತರರು ಇದ್ದರು. ಶಶಿಕಲಾ ಅಕ್ಕಿ ಸ್ವಾಗತಿಸಿದರು. ಸುಧಾ ಕಬ್ಬೂರ ನಿರೂಪಿಸಿದರು. ಡಾ.ಸುಮಾ ಹಡಪದ ವಂದಿಸಿದರು.