ಸೌಹಾರ್ದಯುತ ಜಗತ್ತು ಕಟ್ಟೋಣ

ROCK GARDEN
Published on

ಶಿಗ್ಗಾಂವಿ: ಯೋಗ ಎಂದರೆ ಒಗ್ಗೂಡುವಿಕೆ. ಇದರಿಂದ ಮನಸಿನ ಜತೆಗೆ ದೇಹವೂ ಶುದ್ಧೀಕರಣಗೊಳ್ಳುತ್ತದೆ ಎಂದು ಜಾನಪದ ವಿವಿ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ ಹೇಳಿದರು.

ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನ ಜಾನಪದ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಯೋಗ ಎಂದರೆ ಒಗ್ಗಟ್ಟು. ಅದು ಮಾನವತೆ, ಪ್ರಕೃತಿ ಮತ್ತು ಜಗತ್ತಿನ ಕೋಟ್ಯಂತರ ಜನರನ್ನು ಒಗ್ಗೂಡಿಸುತ್ತದೆ. ವಿಶ್ವ ಕುಟುಂಬಕ್ಕಾಗಿ ಯೋಗ ಈ ವರ್ಷದ ಸಂದೇಶವಾಗಿದೆ. ಈ ದಿನದ ನೆಪದಲ್ಲಿ ನಾವು ಒಗ್ಗಟ್ಟನ್ನು ಅಪ್ಪಿಕೊಂಡು ಸೌಹಾರ್ದಯುತ ಜಗತ್ತು ಕಟ್ಟುವ ಸಂಕಲ್ಪ ಮಾಡೋಣ ಎಂದರು.

ಉತ್ಸವ ರಾಕ್ ಗಾರ್ಡನ್ ಸಮಿತಿ ಅಧ್ಯಕ್ಷೆ ವೇದಾರಾಣಿ ದಾಸನೂರ ಮಾತನಾಡಿ, ಯೋಗ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಇಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಸಕ್ತರು ಸೇರಿರುವುದು ಇದಕ್ಕೆ ಸಾಕ್ಷಿ. ಇದು ನಿಜವಾಗಿಯೂ ಉತ್ತಮ ಬೆಳವಣಿಗೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿಗ್ಗಾಂವಿಯ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಭಾರತಿ ಅಕ್ಕ ಮಾತನಾಡಿದರು. ವಿದ್ಯಾರ್ಥಿಗಳಿಗೆ ಹಾಗೂ ಯೋಗಾಸಕ್ತರಿಗೆ ಯೋಗ ಶಿಕ್ಷಕ ಮಂಜುನಾಥ ಅವರು ಯೋಗಸಾನಗಳನ್ನು ಹೇಳಿಕೊಟ್ಟರು.

ಉತ್ಸವ ರಾಕ್ ಗಾರ್ಡನ್ ಸಮಿತಿ ಕಾರ್ಯದರ್ಶಿ ಪ್ರಕಾಶ ದಾಸನೂರ, ಬಸವರಾಜ ಮಡಿವಾಳರ, ಆನಂದಗೌಡ ಪಾಟೀಲ, ಅನುಪಮಾ ಹೆಬ್ಬಾರ, ಸಾಗರ ದಾಸನೂರ ಹಾಗೂ ಸಿಬ್ಬಂದಿ, ಗೊಟಗೋಡಿ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net