ಜಾತಿ, ಮತ, ಪಂಥ ಮೀರಿ ದೇಶ ಕಟ್ಟೋಣ

basavanna joshi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಜಗಜ್ಯೋತಿ ಬಸವೇಶ್ವರರು ಜಾತಿ-ವಿಜಾತಿ ವಿರುದ್ಧ ಹೋರಾಟ ಮಾಡಿದ್ದರು. ನಾವೆಲ್ಲ ಬಸವಣ್ಣನವರ ನಿಜವಾದ ಅನುಯಾಯಿಗಳಾಗಿದ್ದರೆ ಜಾತಿ-ಮತ-ಪಂಥ ಮೀರಿ ದೇಶ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಆವರಣದಲ್ಲಿ ವೀರಶೈವ ಸಂಘಟನಾ ಸಮಿತಿ ಹಾಗೂ ಶ್ರೀ ವಿಶ್ವಗುರು ಬಸವೇಶ್ವರ ಜಯಂತಿ ಉತ್ಸವ ಸಮಿತಿ ಗುರುವಾರ ಆಯೋಜಿಸಿದ್ದ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪಂಗಡ, ಒಳಪಂಗಡಗಳ ನಡುವೆ ಸಂಘರ್ಷ ಏರ್ಪಟ್ಟಿರುವುದು ನಮ್ಮೆಲ್ಲರ ದೌರ್ಭಾಗ್ಯ ಎಂದರು.

ಜಗತ್ತಿಗೆ ಕರ್ನಾಟಕದ ಅತಿ ದೊಡ್ಡ ಕೊಡುಗೆ ಬಸವಣ್ಣನವರು. ಅವರು 12ನೇ ಶತಮಾನದಲ್ಲಿಯೇ ಅನುಭಾವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಜಾತಿ, ಉಪಜಾತಿಗಳ ಒಡಕಿನ ನಡುವೆಯೂ ಸಹಪಂಕ್ತಿ ಭೋಜನ, ಸಮಾನತೆ ಕಲ್ಪನೆಯನ್ನು ಕೊಟ್ಟಿದ್ದರು. ಮೂಢನಂಬಿಕೆಯನ್ನು ಬಿಟ್ಟು ವೈಚಾರಿಕೆಯನ್ನು ಚರ್ಚೆಗೆ ತಂದಿದ್ದರು ಎಂದು ಹೇಳಿದರು.

21ನೇ ಶತಮಾನ ನಮ್ಮದಾಗಿದೆ. ವಿಶ್ವದ ಮುಂದೆ ನಮ್ಮ ವಿಶ್ವಾಸಾರ್ಹತೆ ಹೆಚ್ಚಿದೆ. ಭಾರತದ ಮುಂದೆ ಇಂದು ಅಪರಿಮಿತ ಅವಕಾಶಗಳಿವೆ. ಕಾಯಕವೇ ಕೈಲಾಸ, ದಯೆಯೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ಹಿತೋಪದೇಶವನ್ನು ಅನುಸರಿಸಿಕೊಂಡು ನಮ್ಮ ಮುಂದಿನರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತ ಭವನ ನಿರ್ವಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬಸವ ತತ್ವ ಎಲ್ಲೆಡೆ ಪಸರಿಸಬೇಕು. 12ನೇ ಶತಮಾನದಲ್ಲಿ ಬಸವೇಶ್ವರರು ಮಹಿಳೆಯರಿಗೆ ಸಮಾನ ಅವಕಾಶದ ಬಗ್ಗೆ ಮಾತನಾಡಿದ್ದರು. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು, ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ನಿರ್ಧಾರವನ್ನು ಹೊಸ ಸಂಸತ್ ಭವನದಲ್ಲಿ ಕೈಗೊಂಡಿದ್ದಾರೆ ಎಂದು ಹೇಳಿದರು.

ಕೆಎಲ್​ಇ ಸಂಸ್ಥೆಯ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ನಾವೆಲ್ಲ ಜೀವನದಲ್ಲಿ ಬಸವೇಶ್ವರರ ಒಂದೆರಡು ವಚನಗಳನ್ನು ಅನುಸರಿಸಿಕೊಂಡು ಬಂದರೆ ಸಾಕು, ನಮ್ಮ ಜೀವನ ಸಾರ್ಥಕವಾಗುತ್ತದೆ. ಸಮಾಜ ಸುಧಾರಣೆಯಾಗುತ್ತದೆ ಎಂದರು.

ವಾಕರಸಾ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಬಸವೇಶ್ವರರು ವಚನ ಸಾಹಿತ್ಯದ ಮೂಲಕ ದೊಡ್ಡ ಕ್ರಾಂತಿಯನ್ನೇ ಮಾಡಿದ್ದರು. ಇಂದಿಗೂ ಬಸವಣ್ಣನವರ ವಚನಗಳು ಪ್ರಸ್ತುತ. ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಹಬಾಳ್ವೆ ನೆಲಸಬೇಕಾದರೆ ಬಸವ ತತ್ವ ಮುಖ್ಯ ಎಂದರು.

ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ತತ್ವ ಚಿಂತಕ ಗೋವಿಂದಪ್ಪ ಗೌಡಪ್ಪಗೋಳ, ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ, ತಾರಾದೇವಿ ವಾಲಿ, ಪ್ರಕಾಶ ಬುರಬುರೆ, ಅಪ್ಪಾಸಾಹೇಬ ಕಟ್ಟಿ, ಪ್ರವೀಣ ಕಟ್ಟಿ, ಅಶೋಕ ಮೀಶಿ, ಇತರರು ಇದ್ದರು. ಪ್ರಕಾಶ ಶೃಂಗೇರಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net