ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮಾದರಿಯಾಗಲಿ

h22-horatti
Published on

ಹುಬ್ಬಳ್ಳಿ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ವರ್ಷ ಧಾರವಾಡ ಜಿಲ್ಲೆ 22 ನೇ ಸ್ಥಾನದಲ್ಲಿತ್ತು. ಈ ಬಾರಿ 10ಕ್ಕಿಂತ ಮೇಲಿರಬೇಕು. ರಾಜ್ಯಕ್ಕೆ ಧಾರವಾಡದ ಫಲಿತಾಂಶ ಮಾದರಿಯಾಗಿರಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಕರ್ನಾಟಕ ರಾಜ್ಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಿಮ್ಮ ಕಷ್ಟಗಳಿಗೆ ನಾನು ಸ್ಪಂದಿಸುತ್ತಿದ್ದೇನೆ. ನಿಮ್ಮೆಲ್ಲ ಜವಾಬ್ದಾರಿ ನಾನು ಹೊತ್ತುಕೊಂಡಿದ್ದೇನೆ. ಈಗ ನಿಮ್ಮ ಸರದಿ. ನೀವು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು. ಇದು ನಿಮ್ಮ ಜವಾಬ್ದಾರಿ. ಈ ಜವಾಬ್ದಾರಿ ನಿರ್ವಹಿಸದೇ ಹೋದಲ್ಲಿ ಡಿಡಿಪಿಐ ಸಹಿತ ಕೆಳ ಹಂತದ ಎಲ್ಲ ಅಧಿಕಾರಿ, ಸಿಬ್ಬಂದಿ ಮೇಲೆ ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಉದ್ಘಾಟಿಸಿ ಮಾತನಾಡಿ, ಫಲಿತಾಂಶ ಹೆಚ್ಚಳ ಸಂಬಂಧ ಅನೇಕ ಕ್ರಮ ಕೈಗೊಳ್ಳಲಾಗಿದೆ. ಮಿಷನ್ ವಿದ್ಯಾಕಾಶಿಯೂ ಇದರಲ್ಲಿ ಒಂದು. ಇದಕ್ಕೆ ಎಲ್ಲ ಶಿಕ್ಷಕರು, ಪಾಲಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಕೈಜೋಡಿಸಬೇಕು ಎಂದರಲ್ಲದೇ ಹಲವು ಉಪ ಕಥೆಗಳ ಮೂಲಕ ಮಾರ್ಗದರ್ಶನ ನೀಡಿದರು.

ಬಸವನಬಾಗೇವಾಡಿಯ ಖ್ಯಾತ ವಾಗ್ಮಿ ಅಶೋಕ ಹಂಚಲಿ ಅವರು ಉಪನ್ಯಾಸ ನೀಡಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಡಿಡಿಪಿಐ ಎಸ್.ಎಸ್. ಕೆಳದಿಮಠ, ರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಬಿ., ಹು-ಧಾ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಪ್ರಮುಕರಾದ ವಿ.ಎಸ್. ಹುದ್ದಾರ, ಚಂದ್ರಶೇಖರ ಡೊಂಬರ, ನಾರಾಯಣ ಭಜಂತ್ರಿ, ಎನ್.ಎನ್. ಸವಣೂರ, ಈರಣ್ಣ ಬಳಿಗಾರ, ಬಿ.ಜಿ. ಬಸೆಟ್ಟಿ, ಎಸ್.ವಿ. ಪಟ್ಟಣಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net