

ಸಾಗರ: ದಲಿತ ಸಂಘರ್ಷ ಸಮಿತಿ(ಡಿಎಸ್‌ಎಸ್) ಎಂದರೆ ದಲಿತ ಸಮುದಾಯದವರು ಮಾತ್ರ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದೇನಿಲ್ಲ. ಸಮಸ್ಯೆಗಳ ಪರಿಹಾರಕ್ಕೆ ಎಲ್ಲರನ್ನೊಳಗೊಂಡ ವೇದಿಕೆ ನಿರ್ಮಾಣಗೊಳ್ಳಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟಿತರಾಗೋಣ ಎಂದು ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ಹೇಳಿದರು.
ನಗರದ ಪವಿತ್ರ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಪ್ರೊ. ಕೃಷ್ಣಪ್ಪ ಸ್ಥಾಪಿತ) ನೂತನ ಘಟಕ ಲೋಕಾರ್ಪಣೆ ಮಾಡಿದ ಅವರು, ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ದಲಿತ ಸಮುದಾಯಕ್ಕೆ ಬೇಕಾದ ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ಪ್ರೊ. ಬಿ.ಕೃಷ್ಣಪ್ಪ ಮಾಡಿರುವ ಹೋರಾಟ ಅವಿಸ್ಮರಣೀಯ. ಹೊಸದಾಗಿ ಸಮಿತಿ ಸೇರಿರುವ ಯುವಕರು ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಂಡು ತುಳಿತಕ್ಕೆ ಒಳಗಾದ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು ಎಂದರು.
ಸಮಿತಿ ಅಧ್ಯಕ್ಷ ಕೆ.ರೇವಪ್ಪ ಹೊಸಕೊಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಭರ್ಮಪ್ಪ ಅಂದಾಸುರ, ಜಿಲ್ಲಾ ಸಂಘಟನಾ ಸಂಚಾಲಕ ಸೋಮಶೇಖರ ಅರಮನೆಕೇರಿ, ನಗರಸಭೆ ಸದಸ್ಯೆ ಲಲಿತಮ್ಮ, ಪ್ರಮುಖರಾದ ರಮೇಶ್ ಮಡಿವಾಳ, ಗುಡವಿ ಸ್ವಾಮಿರಾವ್, ದರ್ಶನ್, ಪ್ರಶಾಂತ್, ಅಣ್ಣಪ್ಪ ಭೋವಿ, ಶೇಖರ್, ವೆಂಕಟೇಶ್ ಇತರರಿದ್ದರು.