

ದೇಶ ಒಡೆಯುವ ಕೆಲಸ ನಡೆಯುತ್ತಿದ್ದು, ಅದನ್ನು ತಪ್ಪಿಸಲು ಎಲ್ಲರೂ ಒಂದಾಗಿ ವಿರೋಧಿಸಬೇಕು ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಹೇಳಿದರು.
ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ಯಾವುದೇ ಸಿದ್ಧಾಂತ ಪ್ರತಿಪಾದನೆ ಮಾಡದೆ ಕೇವಲ ಹಿಂದುತ್ವ ಪ್ರತಿಪಾದನೆ ನಡೆಯುತ್ತಿದೆ. ಆದ್ದರಿಂದ ದಲಿತ, ಕ್ರಿಶ್ಚಿಯನ್, ಮುಸ್ಲಿಂ ಐಡೆಂಟಿಟಿಯ ಜತೆಗೆ ಅಂತರ ಸಮುದಾಯ ಸಾಮೂಹಿಕ ಐಡೆಂಟಿಟಿ ಮೂಲಕ ದೇಶ ಒಡೆಯುವುದನ್ನು ತಪ್ಪಿಸಬೇಕು ಎಂದರು.
ವಿಶ್ವವಿದ್ಯಾಲಯಗಳಲ್ಲಿ ಪ್ರಶ್ನೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅಭಿವ್ಯಕ್ತಿ ಸ್ವಾತಂತ್ರೃವನ್ನು ಉಪಯೋಗಿಸಿಕೊಂಡು ದಬ್ಬಾಳಿಕೆಯನ್ನು ವಿರೋಧಿಸಬೇಕು ಎಂದರು.
ಸಮಾಜದ ಆಗು-ಹೋಗು, ಬಿರುಕು, ಕಷ್ಟ-ಕಾರ್ಪಣ್ಯಗಳನ್ನು ಪ್ರಶ್ನೆ ಮಾಡುವ ಪ್ರವೃತ್ತಿ ಜಾಗತೀಕರಣದಿಂದ ಬರುತ್ತದೆ ಎನ್ನುತ್ತಾರೆ. ಆದರೆ, ಪ್ರಶ್ನೆ ಮಾಡುವುದು, ವಾದ ಮಾಡುವುದು, ಸಂವಾದ ನಡೆಸುವುದು ಪ್ರಜಾಪ್ರಭುತ್ವದಲ್ಲಿ ಮುಖ್ಯ ವಿಚಾರವಾಗಿವೆ. ಅದು ಹಿಂದಿನಿಂದ ನಮ್ಮಲ್ಲೂ ಇತ್ತು. ಆದರೆ, ಅದನ್ನು ಏಕೆ ಮರೆಮಾಚಿದರು ಎಂದು ಪ್ರಶ್ನಿಸಿದರು.
ಧಾರ್ಮಿಕ ಮೂಲಭೂತವಾದದ ಪೋಷಣೆಗಾಗಿ ಸತ್ಯಗಳನ್ನು ಬಚ್ಚಿಡುವ ಕೆಲಸವಾಗಿದೆ. ಸ್ವಾಮಿ ವಿವೇಕಾನಂದ ಅವರ ವಿಶ್ವಮಾನವ ಸಂದೇಶಗಳನ್ನು ಬಚ್ಚಿಟ್ಟು, ಅವರನ್ನು ಹಿಂದು ಧರ್ಮಕ್ಕೆ ಸೀಮಿತಗೊಳಿಸುವ ಕೆಲಸವೂ ನಡೆದಿದೆ. ಸ್ವಾಮಿ ವಿವೇಕಾನಂದದರ ಬಗ್ಗೆ ಮಾತನಾಡಿದ್ದಾಗ ನಮ್ಮ ಪಕ್ಷದವರೇ ಹುಬ್ಬೇರಿಸಿದ್ದರು. ಬಹುತೇಕರು ವಿವೇಕಾನಂದರ ಬಗ್ಗೆ ಓದದೆ ತಪ್ಪು ಕಲ್ಪನೆಯಲ್ಲಿದ್ದಾರೆ. ನಾನು ಓದುವ ಪ್ರಯತ್ನ ಮಾಡಿದ್ದೇನೆ ಎಂದರು.
‘ಪ್ರತಿಯೊಬ್ಬರು ಒಂದೇ ಧರ್ಮಕ್ಕೆ ಸೇರಿ, ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬಾರದಿರಲಿ, ಆಗ ಧರ್ಮ ಮತ್ತು ಆಧ್ಯಾತ್ಮಿಕ ಭಾವನೆ ನಾಶವಾಗುವುದು’, ‘ಮನಷ್ಯ ಮನುಷ್ಯರ ನಡುವೆ ಇರುವ ಸಹೋದರ ಭಾವನೆಗಳಿಗೆ, ಹಿಂದು, ಕಿಶ್ಚಿಯನ್, ಮುಸ್ಲಿಂ ಮುಂತಾದ ಹೆಸರುಗಳು ದೊಡ್ಡ ಆತಂಕವಾಗಿವೆ. ಮೊದಲು ಅವುಗಳನ್ನು ಮುರಿಯಲು ಪ್ರಯತ್ನಿಸಬೇಕು. ಅವು ತಮ್ಮಲ್ಲಿದ್ದ ಒಳ್ಳೆಯ ಶಕ್ತಿಗಳನ್ನು ಕಳೆದುಕೊಂಡು ಈಗ ಕೇವಲ ನಾಶಕಾರಿ ಶಕ್ತಿಯನ್ನು ಮಾತ್ರ ಹೊಂದಿವೆ. ನಮ್ಮಲ್ಲಿ ಉತ್ತಮರಾದವರೂ ಅದರ ಭಯಾನಕ ಪ್ರಭಾವಕ್ಕೆ ಒಳಗಾಗಿ ಪಿಶಾಚಿಯಂತಾಗಿದ್ದಾರೆ’ ಎಂಬ ಸಂದೇಶ ನೀಡಿದ್ದಾರೆ. ಇದಕ್ಕಿಂತ ವಿಶ್ವಮಾನವ ಸಂದೇಶ ಏನು ಬೇಕು? ಆದರೆ, ಅದನ್ನು ಮರೆ ಮಾಚಲಾಗಿದೆ ಎಂದರು.
ಔರಂಗಜೇಬ್‌ನ ಪುತ್ರನೊಬ್ಬ ನಮ್ಮ ರಾಮಾಯಣ ಮತ್ತು ಮಹಾಭಾರತವನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿ, ಅದನ್ನು ಇಡೀ ಪ್ರಪಂಚಕ್ಕೆ ತಲುಪಿಸಲು ಪ್ರಯತ್ನಿಸಿದ್ದನು. ಇದು ಎಷ್ಟು ಜನರಿಗೆ ಗೊತ್ತು? ಈ ವಿಚಾರವನ್ನು ಏಕೆ ಹೇಳುವುದಿಲ್ಲ? ಎಲ್ಲರೂ ದ್ವೇಷಿಗಳಾಗಬೇಕಾ ಎಂದು ಪ್ರಶ್ನಿಸಿದರು.
ಈದ್ ದಿನ ಮುಸ್ಲಿಂ ಸಮುದಾಯದ ಅನೇಕರು ಮಂತ್ರಾಲಯಕ್ಕೆ ಹೋಗಿ ಪೂಜೆ ಸಲ್ಲುತ್ತಾರೆ. ಇಂತಹ ಭಾವೈಕ್ಯ ಸಂಪ್ರದಾಯಗಳನ್ನು ಹೊರ ಜಗತ್ತಿಗೆ ತಿಳಿಸಬೇಕು ಎಂದರು.
ವಿಧಾನ ಪರಿಷತ್ ಸಭಾಪತಿಯಾಗಿದ್ದಾಗ ಬೆಂಗಳೂರಿನಲ್ಲಿ ಐದು ಮದರಸಗಳಿಗೆ ಭೇಟಿ ನೀಡಿದ್ದೆ. ಅಲ್ಲಿ 10 ವರ್ಷದ ಹೆಣ್ಣು ಮಕ್ಕಳು, 14 ವರ್ಷದ ಗಂಡು ಮಕ್ಕಳು ಕುರಾನ್ ಓದುತ್ತಿದ್ದರು. ಆಗ ಅಲ್ಲಿಗೆ ಐದು ಕಂಪ್ಯೂಟರ್‌ಗಳನ್ನು ನೀಡಲಾಯಿತು. ಮೂರು ತಿಂಗಳು ಬಿಟ್ಟು ಅದೇ ಮದರಸಗಳಿಗೆ ಹೋಗಿ ನೋಡಿದರೆ ಆಶ್ಚರ್ಯವಾಯಿತು. ಎಲ್ಲ ಮಕ್ಕಳು ಅಮೆರಿಕ, ಯುಕೆ ಮಕ್ಕಳಂತೆ ಕಂಪ್ಯೂಟರ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು ಎಂದು ತಿಳಿಸಿದರು.