

ಮುಳಬಾಗಿಲು: ಭಾರತೀಯ ಸಂಸತಿ, ಪರಂಪರೆ ಸನಾತನ ಧಾರ್ಮಿಕ ತಳಹದಿ ಮೇಲೆ ಬಲಿಷ್ಠವಾಗಿ ನಿಂತಿದೆ, ದೇವಿ ರೇಣುಕಾ ಯಲ್ಲಮ್ಮ ಶೋಷಿತ ಸಮುದಾಯದ ಕುಲದೇವರಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ದೇವರ ಸೇವೆ ಮಾಡಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ತಿಳಿಸಿದರು.
ನಗರದ ನೇತಾಜಿ ನಗರದಲ್ಲಿ ಹಮ್ಮಿಕೊಂಡಿದ್ದ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 18ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಪುರಾತನ ಇತಿಹಾಸವಿರುವ ಭಾರತೀಯರ ಧಾರ್ಮಿಕ ಪರಂಪರೆ, ಸಂಸತಿ ಉಳಿಸಿ ಯುವಪೀಳಿಗೆಯಲ್ಲಿ ನೈತಿಕ ಮೌಲ್ಯಗಳನ್ನು ವೃದ್ಧಿಸುವ ಕಾರ್ಯವಾಗಬೇಕಿದೆ, ನಿರಂತರವಾದ ಧಾರ್ಮಿಕ ಕಾರ್ಯಗಳ ಮೂಲಕ ಮಾನಸಿಕ ನೆಮ್ಮದಿ, ಶಾಂತಿ ತಂದುಕೊಳ್ಳಬಹುದು ಎಂದರು.
ಬಾಲ್ಯದಿಂದಲೇ ಯುವ ಜನಾಂಗದಲ್ಲಿ ಸಾಮಾಜಿಕ, ನೈತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಬಿತ್ತಬೇಕು ಇದರಿಂದ ಒಳ್ಳೆತನ ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಸುಖಿ ಕುಟುಂಬ ಸುಂದರ ಸಮಾಜ ನಿಮಾರ್ಣಕ್ಕೆ ಆದ್ಯತೆ ನೀಡಿದಂತಾಗುತ್ತದೆ ಎಂದರು.
ಯುವಪೀಳಿಗೆಯ ಮೇಲೆ ಹಿರಿಯರ ವರ್ತನೆಗಳ ಪ್ರಭಾವ ಬೀರಿ, ಕ್ಷೀಣಿಸುತ್ತಿರುವ ಸಂಸ್ಕಾರ, ಗುರು ಹಿರಿಯರಲ್ಲಿನ ಗೌರವಾದರ ಭಾವನೆಗಳು ಮರುಸೃಷ್ಟಿಯಾಗಬೇಕಿದೆ. ಜೀವನದ ಸರಳತೆ ಅನಿವಾರ್ಯವಾಗಿದ್ದು, ಆಡಂಬರ, ಆಧುನೀಕರಣತೆಯ ಪ್ರಭಾವದಿಂದ ಕುಸಿಯುತ್ತಿರುವ ಮೌಲ್ಯಗಳು ಮರುಸ್ಥಾಪನೆಯಾಗಬೇಕು ಎಂದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ, ಕ್ಷೇತ್ರದ ಎಲ್ಲ ಜನರೂ ಶಾಂತಿಯಿಂದ ಬದುಕಬೇಕಿದೆ. ನಾಗರಿಕರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುತ್ತಿದೆ ಎಂದರು.
ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ರೇಣುಕಾ ಯಲ್ಲಮ್ಮನಿಗೆ ವಿಶೇಷ ಹೋಮ, ಹವನ, ಅಭಿಷೇಕ ಹೂವಿನ ಅಲಂಕಾರ ಮಾಡಲಾಗಿತ್ತು.
ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಎನ್. ರಾಜಣ್ಣ, ಮುಖಂಡರಾದ ಎಂ. ಅಮರ್, ಭೂ ಮಂಜೂರಾತಿ ಸಮಿತಿ ಸದಸ್ಯ ಜಮನಹಳ್ಳಿ ಕೃಷ್ಣ್ಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಗೊಲ್ಲಹಳ್ಳಿ ಪಿ.ವೆಂಕಟೇಶ್, ಜೆಡಿಎಸ್ ಮುಖಂಡ ಆವಣಿ ಎಂ.ಆರ್.ನಾಗಭೂಷಣ ಬಾಬು, ರೋಟರಿ ಮುಳಬಾಗಿಲು ಸೆಂಟ್ರಲ್ ಅಧ್ಯಕ್ಷ ನಗವಾರ ಎನ್.ಆರ್. ಸತ್ಯಣ್ಣ, ಸ್ಥಳಿಯ ಮುಖಂಡರಾದ ವಿಜಯಕುಮಾರ್, ಎಲ್ಎಲ್ಬಿ ಶ್ರೀನಿವಾಸ್ ಇದ್ದರು.