

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದ ಎಲ್ಲ ಜನರೂ ಒಂದೇ ಭಾವನೆಯಿಂದ ಜೀವನ ನಡೆಸಬೇಕು. ಬೌದ್ಧ, ಜೈನ, ಮುಸ್ಲಿಂ, ಸಿಖ್ ಸೇರಿ ಎಲ್ಲ ಧರ್ಮದವರು ಒಂದೇ. ಮಹಾತ್ಮ ಗಾಂಧೀಜಿ ಜತೆ ಎಲ್ಲ ಧರ್ಮದ ನಾಯಕರು ಒಗ್ಗಟ್ಟಿನಿಂದ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರೃ ದೊರಕಿಸಿಕೊಟ್ಟರು. ಗಾಂಧೀಜಿ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿ ನಿಮಿತ್ತ ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಗಾಂಧಿ ಭಜನೆ, ಸರ್ವಧರ್ಮ ಪ್ರಾರ್ಥನೆ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಸಂಜೀವ ಕುಲಕರ್ಣಿ ಮಾತನಾಡಿ, 2007ರಿಂದ ಅಹಿಂಸಾ ದಿವಸ ಆಚರಿಸಲಾಗುತ್ತಿದೆ. ಗಾಂಧೀಜಿ ಪ್ರತಿ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಸ್ವಚ್ಛತೆ, ಆಧ್ಯಾತ್ಮ ಸೇರಿ ಹಲವು ಕ್ಷೇತ್ರಗಳಲ್ಲಿ ಜೀವನದುದ್ದಕ್ಕೂ ವಿವಿಧ ಕಾರ್ಯದಲ್ಲಿ ತೊಡಗಿದ್ದರು. ದಕ್ಷಿಣ ಆಫ್ರಿಕಾದಿಂದ ಮರಳಿ ಭಾರತಕ್ಕೆ ಬಂದು ಚರಕದ ಮೂಲಕ ಖಾದಿ ಕ್ರಾಂತಿಗೆ ನಾಂದಿ ಹಾಡಿದರು. ಚರಕದಿಂದ ನೂಲು ತೆಗೆಯುವ ಕಾರ್ಯಕ್ಕೆ ಒತ್ತು ನೀಡಿದರು. ಜಿಲ್ಲೆಯಲ್ಲಿ 50 ಚರಕಗಳನ್ನು ಒಂದೆಡೆ ಇಟ್ಟು ಮಕ್ಕಳಿಗೆ ಅದರ ಮಹತ್ವ ಹಾಗೂ ತರಬೇತಿ ನೀಡಬೇಕು ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರಣ್ಯ ಪ್ರೌಢ ಶಾಲೆಯ ಸವಿಷ್ಣಾ ಜಕ್ಕಣವರ ಪ್ರಥಮ, ಕರ್ನಾಟಕ ಪ್ರೌಢಶಾಲೆಯ ಅನುಶ್ರೀ ಸನದಿ ದ್ವಿತೀಯ ಹಾಗೂ ಅನ್ನಪೂರ್ಣ ಹೊಸಂಗಡಿ ತೃತೀಯ ಸ್ಥಾನ ಪಡೆದಿದ್ದಾರೆ. ಪದವಿ ಪೂರ್ವ ವಿಭಾಗದಲ್ಲಿ ಅಣ್ಣಿಗೇರಿ ತಾಲೂಕು ನಲವಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕವನಾ ಗಂಗಪ್ಪ ಹೆಬ್ಬಳ್ಳಿ ಪ್ರಥಮ, ಧಾರವಾಡದ ಹುರಕಡ್ಲಿ ಅಜ್ಜ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಲಕ್ಷ್ಮೀಬಾಯಿ ಪಾಟೀಲ ದ್ವಿತೀಯ ಹಾಗೂ ಆರ್‌ಎನ್‌ಎಸ್ ಆವರಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಗೀತಾ ಬಿದರಗಡ್ಡಿ ತೃತೀಯ ಸ್ಥಾನ ಪಡೆದಿದ್ದಾರೆ. ಪದವಿ/ಸ್ನಾತಕೋತ್ತರ ಪದವಿ ವಿಭಾಗದಲ್ಲಿ ವಿದ್ಯಾಗಿರಿಯ ಜೆಎಸ್‌ಎಸ್ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಕಾಲೇಜಿನ ವಿಶ್ವನಾಥ ಕಂಬಾರ ಪ್ರಥಮ, ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸುಕುಮತಿ ಪಿರಗಿ ದ್ವಿತೀಯ ಹಾಗೂ ಕುಂದಗೋಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲಲಿತಾ ಕಟಗಿ ತೃತೀಯ ಸ್ಥಾನ ಪಡೆದಿದ್ದಾರೆ.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹು-ಧಾ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ವಾರ್ತಾ ಸಹಾಯಕ ಡಾ. ಸುರೇಶ ಹಿರೇಮಠ, ಶಾಲೆ, ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸರ್ವಧರ್ಮದ ಗುರುಗಳು ಪ್ರಾರ್ಥನೆ ನೆರವೇರಿಸಿದರು. ಮಂಜುನಾಥ ಸುಳ್ಳೊಳ್ಳಿ ಸ್ವಾಗತಿಸಿದರು. ಡಾ. ಪೂರ್ಣಿಮಾ ವಕ್ಕುಂದಿ ವಂದಿಸಿದರು.