

ಸಿದ್ದಾಪುರ : ಕಾವೇರಿ ನದಿಯ ಸ್ವಚ್ಛತೆ ಕಾಪಾಡಲು ಹಾಗೂ ನೀರು ಮಲಿನವಾಗದಂತೆ ಎಲ್ಲರೂ ಕಟಿಬದ್ಧರಾಗಬೇಕೆಂದು ಕಾವೇರಿ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಸಲಹೆ ನೀಡಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸಿದ್ದಾಪುರದ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ಬುಧವಾರ ನಡೆದ ಕಾವೇರಿ ನವಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನೀರು ಅಮೂಲ್ಯವಾಗಿದ್ದು, ಅದರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಿಕಿ ಲೀಲಾವತಿ ಮಾತನಾಡಿ, ನೀರಿನ ಮಹತ್ವ ಹಾಗೂ ಅದರ ಬಳಕೆಯ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪುರುಷೋತ್ತಮ್ ಮಾತನಾಡಿ, ಕಾವೇರಿ ನದಿ ಸ್ವಚ್ಛ ಮಾಡಲು ಎಲ್ಲರೂ ಮುಂದಾಗಬೇಕು. ಧರ್ಮಸ್ಥಳ ಸಂಘವು ಕೇವಲ ಸಾಲ ನೀಡಲು ಸಮೀತವಾಗಿಲ್ಲ. ಸಂಘವು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಸಮಾಜದ ಅಭಿವೃದ್ಧಿ ಮತ್ತು ಸೇವೆಗೆ ಕೈ ಜೋಡಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಮೇಲ್ವಿಚಾರಕ ಪ್ರದೀಪ್, ಸೇವಾ ಪ್ರತಿನಿಧಿ ವಿ.ಕೆ.ಉಷಾ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.