

ರಬಕವಿ/ಬನಹಟ್ಟಿ: ಭಾರತೀಯರ ಮನೆ-ಮನಗಳಲ್ಲಿ ಅಜರಾಮರಾಗಿರುವ ಪ್ರಭು ರಾಮನ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಪಂ ಮಾಜಿ ಸದಸ್ಯ ಗುರುಪಾದಯ್ಯ ಮರಡಿಮಠ ಹೇಳಿದರು.
ತಾಲೂಕಿನ ನಾವಲಗಿ ಗ್ರಾಮದಲ್ಲಿ ಶ್ರೀ ರಾಮನವಮಿ ನಿಮಿತ್ತ ಭಾನುವಾರ ಜರುಗಿದ ಶ್ರೀರಾಮ ದೇವರ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಚನ ಪಾಲನೆ, ಸತ್ಯ, ಧರ್ಮ, ನಿಷ್ಠೆ ಮತ್ತು ನ್ಯಾಯೋಚಿತ ಜೀವನ ನಡೆಸುವ ಮೂಲಕ ನಾವೂ ರಾಮನ ಉದಾತ್ತ ಜೀವನ ಮೌಲ್ಯಗಳನ್ನು ಬಿತ್ತರಿಸಬೇಕು. ನಮ್ಮ ಸನಾತನ ಹಿಂದು ಧರ್ಮದಲ್ಲಿ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿ ಇವೆಲ್ಲವು ಪ್ರಮುಖವಾಗಿವೆ. ನಾವೆಲ್ಲರೂ ಜಾತ್ರೆ, ಹಬ್ಬ ಹರಿದಿನಗಳು ಹಾಗೂ ಸತ್ಸಂಗದಲ್ಲಿ ಭಾಗವಹಿಸುವ ಮೂಲಕ ಸನ್ಮಾರ್ಗದ ಹಾದಿ ಹಿಡಿಯಬೇಕಿದೆ ಎಂದರು.
ರಾಮನ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಗ್ರಾಮದ ಹಿರಿಯರಾದ ಮಲ್ಲಪ್ಪ ವಾಲಿ, ಗ್ರಾಪಂ ಅಧ್ಯಕ್ಷೆ ರೇಖಾ ಕಾಂತಿ, ಆನಂದ ಕಂಪು, ನಿಂಗಪ್ಪ ಕಾಂತಿ, ವೆಂಕಪ್ಪ ನಾಯಕ, ರಂಗಪ್ಪ ಕಾಮಾಣಿ, ಬಸಪ್ಪ ಕಂಕಣವಾಡಿ. ಗಿರಮಲ್ಲಪ್ಪ ಕಾಮಾಣಿ, ವೆಂಕಪ್ಪ ಕಾಮಾಣಿ, ಅಡಿವೆಪ್ಪ ಚಿಕ್ಕಾಟಿ. ಪರಶುರಾಮ ಕಾಮಾಣಿ ಮತ್ತಿತರರಿದ್ದರು.