

ವಿಜಯಪುರ: ಸಮಾಜದ ಎಲ್ಲ ಸಮುದಾಯಗಳಿಗೂ ತನ್ನದೇ ಆದ ಮೌಲ್ಯಗಳಿರುತ್ತವೆ. ಅಂತಹ ಮೌಲ್ಯಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ ಭೇದ ತೊರೆದು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹನೀಯರ ತತ್ವ, ಸಿದ್ಧಾಂತ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಉನ್ನತ ಮಟ್ಟಕ್ಕೆ ಬೆಳೆಸಬೇಕೆಂಬ ಸಂಕಲ್ಪದೊಂದಿಗೆ ಮಕ್ಕಳಲ್ಲಿ ಸಂಸ್ಕಾರ ನೀಡಬೇಕೆಂದರು.
ಡಾ.ರಾಘವೇಂದ್ರ ಗುರುಜಾಲ ಮಾತನಾಡಿ, ಸವಿತಾ ಮಹರ್ಷಿಯವರು ಲೋಕ ಕಲ್ಯಾಣಕ್ಕಾಗಿ ನಯ, ವಿನಯ ಹಾಗೂ ಪಾರದರ್ಶಕದಿಂದ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ಅದು ಅಲ್ಲದೆ ತಮ್ಮ ವೃತ್ತಿಯೊಂದಿಗೆ ಆಯುರ್ವೇದ ವೈದ್ಯಕೀಯ ಪದ್ಧತಿ ಹಾಗೂ ಸಂಗೀತ ರಂಗದಲ್ಲಿಯೂ ಮುಂಚೂಣಿಯಲ್ಲಿದರು ಎಂದು ತಿಳಿಸಿದರು.
ಸವಿತಾ ಸಮಾಜದ ಕೆಲವರು ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸಿರುವರು. ಅವರು ತಮ್ಮ ಸಮಾಜದಲ್ಲಿನ ಹಿಂದುಳಿದ ಕುಟುಂಬಗಳ ಶಿಕ್ಷಣಕ್ಕೆ ಸಹಾಯ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಉಪ ತಹಸೀಲ್ದಾರ್ ಐ.ಎಚ್. ತುಂಬಗಿ ಮಾತನಾಡಿ, ಇಂದಿನ ಕಾಲದಲ್ಲಿ ನಮ್ಮ ಮೂಲ ವೃತ್ತಿಗಳು ಸಂದರ್ಭಕ್ಕೆ ತಕ್ಕಂತೆ ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ ಹಾಗೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಅವರು ಹೇಳಿದರು.
ಉಪ ವಿಭಾಗಾಧಿಕಾರಿ ಗುರುನಾಥ ದಡ್ಡಿ, ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿ ಎ.ಬಿ. ಅಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಬೋವಿ, ಸಮಾಜದ ಮುಖಂಡ ರಾಜು ಬಳ್ಳಾರಿ, ಗುರುರಾಜ ಪಂಚಲಿಂಗ, ವೆಂಕಟೇಶ್ ಗುರುಜಾಲ, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಗುರುಜಾಲ, ಲಕ್ಷ್ಮಿಬಾಯಿ ಬಳ್ಳಾರಿ, ವೀಣಾ ಮುಧೋಳ, ವಿದ್ಯಾವತಿ ಅಂಕಲಗಿ, ಸೋಮನಗೌಡ ಕಲ್ಲೂರು, ದೇವೆಂದ್ರ ಮಿರೇಕರ, ಭೀಮರಾಯ ಜಿಗಜಿಣಗಿ, ಗಿರೀಶ್ ಕುಲಕರ್ಣಿ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಿದ್ಧೇಶ್ವರ ದೇವಸ್ಥಾನದಿಂದ ಕಂದಗಲ್ಲ ಹನುಮಂತರಾಯ ರಂಗಮಂದಿರದವರೆಗೆ ನಡೆದ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಚಾಲನೆ ನೀಡಿದರು.