ಸ್ನೇಹ, ಪ್ರೀತಿಯನ್ನು ಜೀವನದಲ್ಲೂ ಅಳವಡಿಸಿಕೊಳ್ಳೋಣ

kudige
ಡಾ. ಶ್ರೀಕಂಠ ಕೂಡಿಗೆ ಅವರಿಗೆ ಜಿಎಸ್‌ಎಸ್ ಪುರಸ್ಕಾರ ಪ್ರದಾನ ಮಾಡಲಾಯಿತು. ಡಾ. ಶ್ರೀಪತಿ ಹಳಗುಂದ, ಡಾ.ಚನ್ನೇಶ್ ಹೊನ್ನಾಳಿ, ಪ್ರೊ. ಕಿರಣ ದೇಸಾಯಿ, ಕೆ.ಎಸ್.ಈಶ್ವರಪ್ಪ, ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಇತರರಿದ್ದರು.
Published on

ಶಿವಮೊಗ್ಗ: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ನನ್ನ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಅಂಥವರ ಹೆಸರಿನಲ್ಲಿ ನೀಡಲಾಗುವ ಪುರಸ್ಕಾರವನ್ನು ಪಡೆದಿರುವುದು ಹೆಮ್ಮೆ ತಂದಿದೆ ಎಂದು ಸಾಹಿತಿ ಡಾ. ಶ್ರೀಕಂಠ ಕೂಡಿಗೆ ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ಜಿಎಸ್‌ಎಸ್ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಎಸ್‌ಎಸ್ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ ಹಾಗೂ ದೆಹಲಿಯಲ್ಲೂ ಜಿ.ಎಸ್.ಶಿವರುದ್ರಪ್ಪ ಅವರ ಬಗ್ಗೆ 18 ಭಾಷಣಗಳನ್ನು ಮಾಡಿದ್ದೇನೆ. ಗುರುವಿನ ಆಶಯಗಳನ್ನು ಈಡೇರಿಸುವುದು ಶಿವರುದ್ರಪ್ಪ ಅವರಂಥ ಶಿಷ್ಯರಿಂದ ಮಾತ್ರ ಸಾಧ್ಯ ಎಂದರು.
ಇಂದು ಯಾವುದೇ ವಿಷಯಕ್ಕೆ ಜಗಳವಾಡುವ ಸನ್ನಿವೇಶವಿಲ್ಲ. ಜಗಳ ಮಾಡಿದರೆ ಪರಿಸ್ಥಿತಿಯನ್ನು ಪ್ರಶ್ನಿಸಿದರೆ ಕಷ್ಟ ಎದುರಿಸಬೇಕಾಗುತ್ತದೆ. ಏನಾದರೂ ಮಾತನಾಡಿ ಎಂದು ನನ್ನ ಶಿಷ್ಯರಿಗೆ ಹೇಳಿದರೆ, ಇಲ್ಲ ಸಾರ್, ಏನಾದ್ರೂ ಮಾತಾಡಿದ್ರೆ ಜೈಲಿಗೆ ಹೋಗಬೇಕಾಗುತ್ತದೆ. ಅದೆಲ್ಲವನ್ನೂ ಬಗೆಹರಿಸಿಕೊಳ್ಳುವಷ್ಟರಲ್ಲಿ ನಮ್ಮ ಆಯಸ್ಸು ಮುಗಿದಿರುತ್ತದೆ ಎಂದು ಭಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಸ್ನೇಹ, ಪ್ರೀತಿ ಮುಂತಾದ ಗುಣಗಳನ್ನು ಕೇವಲ ಕವನ, ಸಾಹಿತ್ಯಗಳಲ್ಲಿ ಕಾಣುತ್ತಿದ್ದೇವೆ. ಅದನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಜಿಎಸ್‌ಎಸ್, ಕುವೆಂಪು ಮುಂತಾದವರ ಆಶಯಗಳನ್ನು ಈಡೇರಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮೂರು ವಿಷಯಗಳಲ್ಲಿ ಸಂದಿಗ್ಧತೆ: ಇಂದು ನಾವು ಮೂರು ವಿಷಯಗಳಲ್ಲಿ ಸಂದಿಗ್ಧತೆ ಎದುರಿಸುತ್ತಿದ್ದೇವೆ. ಪ್ರತಿಕ್ರಿಯೆಯನ್ನು ನಿರಾಕರಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಂವಾದಗಳೇ ಇಲ್ಲದ ಸಂದರ್ಭದಲ್ಲಿ ಬದುಕಿದ್ದೇವೆ. ಜನರನ್ನು ಪ್ರಚೋದಿಸುವ, ಕೆರಳಿಸುವ ಸನ್ನಿವೇಶದಲ್ಲಿದ್ದೇವೆ ಎಂದು ಬಾಪೂಜಿನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಚನ್ನೇಶ್ ಹೊನ್ನಾಳಿ ಆತಂಕ ವ್ಯಕ್ತಪಡಿಸಿದರು. ಇಂದು ಪ್ರಭುತ್ವವನ್ನು ಪ್ರಶ್ನಿಸುವ, ಕುಟುಂಬ ರಾಜಕಾರಣವನ್ನು ಟೀಕಿಸುವ, ವ್ಯಕ್ತಿ ಆರಾಧನೆಯನ್ನು ವಿಮರ್ಶಿಸುವ ಪ್ರತಿಕ್ರಿಯೆಗಳನ್ನು ನಿರಾಕರಿಸಲಾಗುತ್ತಿದೆ. ಈ ಕಾಲಘಟ್ಟದಲ್ಲಿ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ರಾಮದಾಸ್, ಶಾಂತವೇರಿ ಗೋಪಾಲ ಗೌಡ ಮುಂತಾದವರು ಹೆಚ್ಚು ಪ್ರಸ್ತುತ ಎನಿಸುತ್ತಾರೆ. ಇದೇ ಸಾಲಿಗೆ ಶ್ರೀಕಂಠ ಕೂಡಿಗೆ ಕೂಡಾ ಸೇರುತ್ತಾರೆ ಎಂದರು. ಧರ್ಮ, ರಾಜಕಾರಣ ಎಲ್ಲದರಲ್ಲೂ ಶ್ರೇಷ್ಠತೆಯ ವ್ಯಸನ ತುಂಬಿದೆ. ಕೇಳಿಸಿಕೊಳ್ಳುವ ತಾಳ್ಮೆ ಯಾರಲ್ಲೂ ಇಲ್ಲ. ಇದೊಂದು ರೀತಿಯ ಬಿಕ್ಕಟ್ಟಿನ ಸನ್ನಿವೇಶವಾಗಿದೆ ಎಂದು ಹೇಳಿದರು.
ಮೂವರ ಚಿಂತನೆ: ಡಾ.ಶ್ರೀಕಂಠ ಕೂಡಿಗೆ ಅವರ ಬದುಕಿನ ಮೇಲೆ ಕುವೆಂಪು ಅವರ ಸಾಹಿತ್ಯ, ಶಾಂತವೇರಿ ಗೋಪಾಲ ಗೌಡರ ಸಮಾಜವಾದಿ ಸಿದ್ಧಾಂತ ಹಾಗೂ ಕೂಡಿಗೆ ಅವರ ಚಿಕ್ಕಪ್ಪ ಎಸ್.ಕೆ.ಗೋಪಾಲ ಗೌಡರ ಚಿಂತನೆಗಳು ಪ್ರಭಾವ ಬೀರಿದವು. ಕೂಡಿಗೆ ಅವರ ಸಾಹಿತ್ಯ ಹಾಗೂ ಅವರ ಚಿಂತನೆಗಳೆಂದು ಅವರ ಜೀವನವನ್ನು ಎರಡು ಭಾಗವಾಗಿ ವಿಮರ್ಶಿಶಬಹುದು. ಸಾಹಿತ್ಯಿಕ ಹಾಗೂ ವೈಚಾರಿಕ ಚಿಂತನೆ ಕೂಡಿಗೆ ಅವರ ಸಾಧನೆಯೂ ಹೌದು. ಕವಿತೆ, ಕಥೆ ರಚಿಸಿರುವ ಕೂಡಿಗೆ ಅವರು ಕನ್ನಡದ ಮುಖ್ಯ ಸಾಹಿತಿಗಳಲ್ಲೊಬ್ಬರು ಎಂದು ಡಾ. ಚನ್ನೇಶ್ ಹೊನ್ನಾಳಿ ಅಭಿಪ್ರಾಯಪಟ್ಟರು.
ಜಿಎಸ್‌ಎಸ್ ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ. ಕಿರಣ ದೇಸಾಯಿ ಆಶಯ ನುಡಿಗಳನ್ನಾಡಿದರು. ಕರ್ನಾಟಕ ಸಂಘದ ಕಾರ್ಯದರ್ಶಿ ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ಜಿಎಸ್‌ಎಸ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಈಶ್ವರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net