ಬಸವಣ್ಣನವರ ತತ್ವಾದರ್ಶ ಅಳವಡಿಸಿಕೊಳ್ಳೋಣ; ಎಡಿಸಿ ಸೋಮಲಿಂಗ ಗೆಣ್ಣೂರ

BASAVA JAYANTI JILLADALITA
Published on

ವಿಜಯಪುರ: ಬುದ್ದ ಕರುಣೆಯ ಮಹತ್ವ ಸಾರಿದರೆ ಬಸವಣ್ಣ ದಯವೇ ಧರ್ಮದ ಮೂಲ ಎಂದರು. ಸಕಲ ಪ್ರಾಣಿಗಳಲ್ಲೂ ದಯೆ ಇರಬೇಕೆಂದು ಬಯಸಿದ ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಸವ ಜಯಂತಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜಾತಿ ವ್ಯವಸ್ಥೆ ಹೋಗಲಾಡಿಸಿ ಸಮಸಮಾಜ ನಿರ್ಮಾಣದ ಕನಸು ಕಂಡವರು ಬಸವಣ್ಣನವರು. 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದವರು. ಕಾಯಕವೇ ಕೈಲಾಸ ಎಂದು ಸಾರಿದರು. ಸಂಸ್ಕೃತಿ, ರೀತಿ ನೀತಿಗಳ ಬಗ್ಗೆಯೂ ಅವರ ವಚನಗಳು ಬೆಳಕು ಚೆಲ್ಲುತ್ವವೆ. ಅವರ ಆದರ್ಶ ವಿಚಾರಗಳು, ವಚನಗಳ ಸಾರ ಅರಿತು ಅಳವಡಿಸಿಕೊಳ್ಳಬೇಕು ಎಂದರು.

ಸಮಾಜದಲ್ಲಿನ ಮೌಢ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿ ತಮ್ಮ ವಚನಗಳ ಮೂಲಕ ಜನಸಾಮಾನ್ಯರಿಗೆ ಅರಿವು ಮೂಡಿಸಿದ ಬಸವಣ್ಣನವರು, ತನ್ನರಿವೆ ತನಗೆ ಗುರು ಎಂದು ಸರಳ ಹಾಗೂ ಜನಸಾಮಾನ್ಯರಾಡುವ ಮಾತಿನಲ್ಲಿ ತಿಳಿಸಿಕೊಟ್ಟರು. ಈ ಸಮಾಜದ ಒಳಿತಿಗಾಗಿ ಜನಸಾಮಾನ್ಯರ ಸುಂದರ ಬದುಕಿಗೆ ಶರಣರ ವಚನಗಳು ದಾರಿದೀಪವಾಗಿವೆ ಎಂದರು.

ಬಸವಣ್ಣನವರ ವಿಚಾರಧಾರೆಗಳು ಪ್ರಜಾಪ್ರಭುತ್ವದ ಆಶಯಗಳು ನಮ್ಮ ಸಂವಿಧಾನದ ಪೀಠಿಕಾಭಾಗದಲ್ಲಿ ಪ್ರಸ್ತಾಪಿಸಿರುವ ಸಾಮಾಜಿಕ ಸಮಾನತೆ, ಜಾತ್ಯತೀತತೆ ಹಾಗೂ ಸಹೋದರತ್ವ ವಿಷಯಗಳು ಕಾಣಬಹುದಾಗಿವೆ. ಜಾತಿ ರಹಿತವಾದ ಕಾಯಕ ತತ್ವವನ್ನು ಸಾರಿದ ಬಸವಾದಿ ಶರಣರ ಚಿಂತನೆಗಳಾದ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯ ತಳಹದಿಯಲ್ಲಿಯೇ ಸಂವಿಧಾನ ರೂಪಿತವಾಗಿದೆ ಎಂದರು.

ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರು ಪ್ರಸ್ತುತವಾಗಿದ್ದಾರೆ. ಅವರ ತತ್ವ ಸಿದ್ಧಾಂತ ನಮಗೆ ಮಾರ್ಗದರ್ಶನವಾಗಿವೆ ಹಾಗೂ ದಾರಿದೀಪವಾಗಿವೆ. ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನಗಳನ್ನು ಯುವಪೀಳಿಗೆ ಅರಿಯಬೇಕು ಎಂದರು.

ಮಂಜುನಾಥ ಜುನಗೊಂಡ ಉಪನ್ಯಾಸ ನೀಡುತ್ತಾ, ಅಜ್ಞಾನವೆಂಬ ಕತ್ತಲೆ ತೊಲಗಿಸಲು ಅವರ ವಚನಗಳು ದೀವಿಗೆಯಾಗಿವೆ. ಸಮಾಜದ ಅಂಕುಡೊಂಕುಗಳ ಹೋಗಲಾಡಿಸಲು ವಚನಗಳ ಮೂಲಕ ಬೆಳಕು ಚೆಲ್ಲಿದ ಅವರು, ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಸಂದೇಶ ಸಾರಿದರು. ದುಡಿದಿದ್ದರಲ್ಲಿ ಹಂಚಿ ಉಣ್ಣಬೇಕು ಎಂಬುದು ಬಸವಣ್ಣನವರ ನಿಲುವಾಗಿತ್ತು ಎಂದರು.

ಎಎಸ್‌ಪಿ ರಾಮನಗೌಡ ಹಟ್ಟಿ ಮಾತನಾಡಿ, ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರ ಆಚಾರ-ವಿಚಾರಗಳ ಕುರಿತು ಮಕ್ಕಳಿಗೆ ತಿಳಿಸಬೇಕು. ಶರಣ ಸಾಹಿತ್ಯ ಜನಸಾಮಾನ್ಯರ ಸಾಹಿತ್ಯವಾಗಿದೆ. ಕಾಯಕ ಹಾಗೂ ದಾಸೋಹ ತತ್ವಗಳು ಶರಣರ ತತ್ವಗಳನ್ನು ಪರಿಪಾಲಿಸಬೇಕು ಎಂದರು.

ವಿ.ಸಿ. ನಾಗಠಾಣ ಮಾತನಾಡಿದರು. ಜಿಪಂ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಮಹಾನಗರ ಪಾಲಿಕೆ ವಲಯ ಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net