

ಬೆಳಗಾವಿ: ಶೇಂಗಾ ಮತ್ತು ಸೋಯಾಬೀನ್ ಕೃಷಿಯಲ್ಲಿ ಕೀಟ ನಿರ್ವಹಣೆಗಾಗಿ ಸುಸ್ಥಿರ ತಂತ್ರಜ್ಞಾನಗಳೊಂದಿಗೆ ರೈತರನ್ನು ಸಜ್ಜುಗೊಳಿಸುವುದು ತರಬೇತಿಯ ಪ್ರಾಥಮಿಕ ಉದ್ದೇಶವಾಗಿದೆ ಎಂದು ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಹೇಳಿದರು.
ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಎಣ್ಣೆಕಾಳು ಯೋಜನೆಯಡಿ ಎಣ್ಣೆಕಾಳು ಬೆಳೆಗಳ ಸಮಗ್ರ ಬೆಳೆ ನಿರ್ವಹಣೆ ಕುರಿತು ಬೆಳೆಗಾರರಿಗೆ ಗುರುವಾರ ಹಮ್ಮಿಕೊಂಡಿದ್ದ 15ನೇ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ತಾಂತ್ರಿಕವಾಗಿ ಸುಸ್ಥಿರ ಕೃಷಿ ಸಾಧಿಸುವಲ್ಲಿ ಸಮಗ್ರ ಕೀಟ ನಿರ್ವಹಣೆ ಮಹತ್ವ ತಿಳಿಸಲಾಯಿತು. ಜೈವಿಕ ನಿಯಂತ್ರಣ ವಿಧಾನ ಮತ್ತು ಜೈವಿಕ ಕೀಟನಾಶಕಗಳ ಸುರಕ್ಷಿತ ಮತ್ತು ಪರಿಣಾಮಕಾರಿ ಬಳಕೆಯಂತಹ ಪ್ರಮುಖ ತಂತ್ರಜ್ಞಾನ ಹೇಳಿಕೊಡಲಾಯಿತು. ಕೇಂದ್ರದ ವಿಜ್ಞಾನಿ ಜಿ.ಬಿ.ವಿಶ್ವನಾಥ, ಸೋಯಾಬೀನ್ ಬೆಳೆಯಲ್ಲಿ ವಿವಿಧ ತಳಿಗಳ ಮಾಹಿತಿ ನೀಡಿದರು. ಡಾ.ಎಸ್.ಎಸ್.ಹಿರೇಮಠ ಅವರು ರೋಗಗಳ ಸಮಗ್ರ ನಿರ್ವಹಣೆ, ಎಸ್.ಎಂ.ವಾರದ ಸೋಯಾಬೀನ್ ಬೆಳೆಯ ಮಣ್ಣಿನ ಫಲವತ್ತತೆ, ಪ್ರವೀಣ ಯಡಹಳ್ಳಿ ಖಾದ್ಯ ತೈಲ ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು. ಚರ್ಚಾಕೂಟ ಏರ್ಪಡಿಸಿ ರೈತರ ಪ್ರಶ್ನೆಗಳಿಗೆ ಉತ್ತರಿಸಲಾಯಿತು.