ಖಾಸಗಿ ಶಾಲೆಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಲಿ

08 DVD 01
ದೇವದುರ್ಗದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಖಾಸಗಿ ಶಾಲೆ ಶಿಕ್ಷಕರಿಗೆ ಸನ್ಮಾನಿಸಲಾಯಿತು. ರುಪ್ಸ ಸಂಘದ ಅಧ್ಯಕ್ಷ ಡಾ.ಲೇಪಾಕ್ಷಿ ಹಾಲನೂರು, ತಾಲೂಕು ಕಾರ್ಯದರ್ಶಿ ಶರಣು ಹುಣಸಗಿ, ಸಚಿನ್ ದೋಟಿಹಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಧರ ದಿಂಡೂರ, ಎ.ರಾಜಶೇಖರ ನಾಯಕ, ಬಿಆರ್‌ಸಿ ಶಿವರಾಜ ಪೂಜಾರಿ, ಶಿವಕುಮಾರ ಹರವಿ ಇದ್ದರು.
Published on

ದೇವದುರ್ಗ: ಸರ್ಕಾರಿ ಶಾಲೆಗಳಿಗೆ ಇಲ್ಲದ ನೀತಿ- ನಿಯಮಗಳನ್ನು ಖಾಸಗಿ ಶಾಲೆಗಳಿಗೆ ವಿಧಿಸುವ ಮೂಲಕ ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ತುಳಿಯುವ ಯತ್ನ ನಡೆಸಿದೆ. ತಾರತಮ್ಯಧೋರಣೆ ನಡುವೆ ಸಂಸ್ಥೆಗಳು ಶಿಕ್ಷಣ ಸೇವೆಯನ್ನು ಮುಂದುವರಿಸಿವೆ ಎಂದು ರುಪ್ಸ ಸಂಘದ ಅಧ್ಯಕ್ಷ ಡಾ.ಲೇಪಾಕ್ಷಿ ಹಾಲನೂರು ಹೇಳಿದರು.

ಪಟ್ಟಣದ ಬಿಎಚ್ ಕಲ್ಯಾಣ ಮಂಟಪದಲ್ಲಿ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ(ರುಪ್ಸ)ದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಸರ್ಕಾರ ಪ್ರತಿವರ್ಷ ಶಿಕ್ಷಣಕ್ಕಾಗಿ 40ಸಾವಿರ ಕೋಟಿ ರೂ. ಖುರ್ಚ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ಶೇ.52ಮಕ್ಕಳಿಗೆ ಮಾತ್ರ ಶಿಕ್ಷಣ ನೀಡುತ್ತಿದೆ. ಸರ್ಕಾರದ ಯಾವುದೇ ಅನುದಾನ ಇಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ.48 ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿದೆ.

ಸರ್ಕಾರ ಪ್ರತಿಮಗುವಿಗೆ ವಾರ್ಷಿಕ 90ಸಾವಿರ ರೂ. ಖರ್ಚು ಮಾಡುತ್ತಿದೆ. ಆದರೆ, ಆರ್‌ಟಿಇ ಯೋಜನೆಯಡಿ ನಮ್ಮ ಶಾಲೆಗೆ ದಾಖಲಾದ ಮಕ್ಕಳಿಗೆ 30ಸಾವಿರ ರೂ. ನೀಡುವಂತೆ ಮನವಿ ಮಾಡಿದರೆ 16ಸಾವಿರ ರೂ. ನೀಡುತ್ತಿದೆ. ಒಂದಿಲ್ಲೊಂದು ನಿಯಮ ರೂಪಿಸಿ ಶಾಲೆ ಮುಚ್ಚಿಸುವ ಹುನ್ನಾರ ನಡೆಸಿದೆ. ಸರ್ಕಾರಿ ಶಾಲೆಗಳು ನೀಡದಂತೆ ಗುಣಮಟ್ಟದ ಶಿಕ್ಷಣವನ್ನು ಖಾಸಗಿ ಶಾಲೆಗಳು ನೀಡುತ್ತಿವೆ. ನೀತಿ, ನಿಯಮ ರೂಪಿಸುವಲ್ಲಿ ಎಲ್ಲ ಶಾಲೆಗಳನ್ನು ಒಂದೇರೀತಿ ನೋಡುತ್ತಿಲ್ಲ.

ಖಾಸಗಿ ಶಾಲೆಗಳಿಗೆ ತೊಂದರೆ ನೀಡುವುದನ್ನು ರುಪ್ಸ ಸಹಿಸಲ್ಲ. ರಾಜ್ಯ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಖಾಸಗಿ ಶಾಲೆ ಶಿಕ್ಷಕರಿಗೂ ನೀಡಬೇಕು ಎನ್ನುವ ಬೇಡಿಕೆ ಇಡಲಾಗಿದೆ. ಸರ್ಕಾರ ನಮ್ಮ ಮನವಿ ಸ್ಪಂದಿಸಬೇಕು. ಕಾರ್ಯಕ್ರಮದಲ್ಲಿ ಬಿಇಒ ಎಚ್.ಸುಖದೇವ್ ಭಾಗವಹಿಸದೆ ಬೇಜವಾಬ್ದಾರಿ ತೋರಿದ್ದಾರೆ ಎಂದು ದೂರಿದರು.

ತಾಲೂಕು ಕಾರ್ಯದರ್ಶಿ ಶರಣು ಹುಣಸಗಿ ಮಾತನಾಡಿದರು. ವಾಗ್ದೇವಿ ವಿದ್ಯಾಮಂದಿರ ಮುಖ್ಯಸ್ಥ ಸಚಿನ್ ದೋಟಿಹಾಳ ಉಪನ್ಯಾಸ ನೀಡಿದರು. ವಿವಿಧ ಶಾಲೆಯ ಶಿಕ್ಷಕರಿಗೆ ಸನ್ಮಾನಿಸಲಾಯಿತು.

ಪ್ರಮುಖರಾದ ಮಹಾಂತೇಶ ಗೌಡರ, ಗಂಗಾಧರ ದೇಶಮುಖ, ವೆಂಕಟೇಶ ಎನ್.ವಕೀಲ, ತಾಲೂಕು ಅಧ್ಯಕ್ಷ ಶಿವಕುಮಾರ ಪಿ.ಹರವಿ, ಚನ್ನಬಸವ ಗುರುವಿನ, ಬಸವರಾಜ ವಕೀಲ, ಭೀಮನಗೌಡ ನಾಗಡದಿನ್ನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net