ಯುವಜನರು ತಾಳ್ಮೆ ಬೆಳೆಸಿಕೊಳ್ಳಲಿ

ನಂಜನಗೂಡು ತಾಲೂಕು ಹುಲ್ಲಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಲಯನ್ ಸಿ.ಆರ್. ದಿನೇಶ್ ಉದ್ಘಾಟಿಸಿದರು. ಎಚ್.ಎಂ. ಬಸವರಾಜು, ಹುಚ್ಚಯ್ಯ, ಸೋಮಶೇಖರ್, ರಾಮಪ್ಪ ಇತರರು ಇದ್ದರು.
ನಂಜನಗೂಡು ತಾಲೂಕು ಹುಲ್ಲಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಲಯನ್ ಸಿ.ಆರ್. ದಿನೇಶ್ ಉದ್ಘಾಟಿಸಿದರು. ಎಚ್.ಎಂ. ಬಸವರಾಜು, ಹುಚ್ಚಯ್ಯ, ಸೋಮಶೇಖರ್, ರಾಮಪ್ಪ ಇತರರು ಇದ್ದರು.
Published on

 ನಂಜನಗೂಡು: ಯುವಕರು ತಾಳ್ಮೆ ಮತ್ತು ಉತ್ತಮ ನಡವಳಿಕೆ ಅಳವಡಿಸಿಕೊಂಡರೆ ಏನನ್ನಾದರೂ ಸಾಧಿಸಬಹುದು ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಯನ್ ಸಿ.ಆರ್.ದಿನೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಅನುಭವದ ಶಿಕ್ಷಣ ಬೇಕಾಗಿದೆ. ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವ್ಯಕ್ತಿ ಬದಲಾವಣೆಗೆ ದಿನಪತ್ರಿಕೆಗಳು ಮಹತ್ವ ಹೊಂದಿವೆ. ಮುದ್ರಣ ಮಾಧ್ಯಮವೂ ಸತ್ಯದಿಂದ ಕೂಡಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಲಹೆ ಸೂಚನೆಗಳು ಸರಿಯಾಗಿ ಸಿಗುತ್ತಿಲ್ಲ. ಮಕ್ಕಳು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸಿದರೆ ತಮ್ಮ ಪ್ರತಿಭೆ ಹೊರಹಾಕಲು ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳ ಮುಂದಿನ ವ್ಯಾಸಂಗ ಭವಿಷ್ಯ ರೂಪಿಸುತ್ತದೆ. ವಿದ್ಯಾರ್ಥಿಗಳಿಗೆ ನಡವಳಿಕೆ ತುಂಬ ಮುಖ್ಯ. ಜೀವಿತಾವಧಿ ಇರುವ ತನಕ ಉತ್ತಮ ನಡವಳಿಕೆಯಿರಬೇಕು. ಹೊಸ ವಿಷಯಗಳನ್ನು ಗ್ರಹಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮೊಟಕು ಮಾಡದೇ ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್.ಎಂ ಬಸವರಾಜು ಮಾತನಾಡಿ, ವಿದ್ಯಾರ್ಥಿಗಳು ಪಠ್ಯಚಟುವಟಿಕೆ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಇವು ಶಿಕ್ಷಣದ ಅವಿಭಾಜ್ಯ ಅಂಗವಾಗಿರುವುದನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಅರಿಯಬೇಕು ಎಂದು ಸಲಹೆ ನೀಡಿದರು.

ಹುಲ್ಲಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಅಪ್ಸನಾ, ನವೀನ್ ಕುಮಾರ್, ಅರುಣ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಹುಚ್ಚಯ್ಯ, ಪ್ರಾಂಶುಪಾಲ ಸೋಮಶೇಖರ್, ಉಪ ಪ್ರಾಂಶುಪಾಲ ರಾಮಪ್ಪ, ಪತ್ರಕರ್ತ ಸಿ.ಎಂ.ಸುಗಂಧರಾಜು, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರವಿ, ಸಮಿವುಲ್ಲಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net