

ಸಿದ್ದಾಪುರ: ಪುರಾಣದಲ್ಲಿನ ಕಥಾವಸ್ತುಗಳನ್ನು ನಿರೂಪಿಸುವ, ಅಲ್ಲಿನ ಪಾತ್ರಗಳನ್ನು ಸಂಭಾಷಣೆ ಮತ್ತು ಚರ್ಚೆಗಳ ಮೂಲಕ ಶೋತೃಗಳ ಎದುರು ಪ್ರಸ್ತುತಪಡಿಸುವ ತಾಳಮದ್ದಳೆ ಜ್ಞಾನವೃದ್ಧಿಗೆ ಸಹಕಾರಿ ಎಂದು ಶಿರಸಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ, ಉದ್ಯಮಿ ರಾಘವೇಂದ್ರ ಶಾಸ್ತ್ರಿ ಬಿಳಗಿ ಹೇಳಿದರು.
ತಾಲೂಕಿನ ಕವಲಕೊಪ್ಪದ ಶ್ರೀ ಸಿದ್ದಿವಿನಾಯಕ ದೇವಾಲಯದ ಸಭಾಂಗಣದಲ್ಲಿ ಒಡ್ಡೋಲಗ ಹಿತ್ಲಕೈ ಅವರು ಆಯೋಜಿಸಿದ್ದ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆ ಎಲ್ಲ ಕಲೆಗಳ ಜತೆಗೆ ಯಕ್ಷಗಾನ, ತಾಳಮದ್ದಳೆ ಕ್ಷೇತ್ರದಲ್ಲೂ ಪ್ರಸಿದ್ಧವಾದದ್ದು. ಯಕ್ಷಗಾನ ಕ್ಷೇತ್ರದಲ್ಲಿ ಯುವ ಕಲಾವಿದರು ಪಾಲ್ಗೊಳ್ಳುವ ಮೂಲಕ ಕಲೆಯನ್ನು ಬೆಳಸುವಂತಾಗಬೇಕು ಎಂದರು.
ಒಡ್ಡೋಲಗ ಸಂಸ್ಥೆ ನೀಡಿದ ರಂಗಗೌರವ ಸ್ವೀಕರಿಸಿ ಮಾತನಾಡಿದ ಯಕ್ಷಗಾನದ ಪ್ರಸಿದ್ಧ ಭಾಗವತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಹೆಗಡೆ ಕೊಳಗಿ, ಯಕ್ಷಗಾನ ಮತ್ತು ತಾಳಮದ್ದಳೆ ಆರಾಧನಾ ಕಲೆಯಾಗಿದ್ದು, ಭಕ್ತಿಯ ಜತೆಗೆ ಮನರಂಜನೆಯನ್ನೂ ನೀಡುತ್ತದೆ. ಈ ಕಲೆಗೆ ಕಲಿಕೆ ತುಂಬ ಮುಖ್ಯ. ಯುವಕರು ಈ ಕ್ಷೇತ್ರದಲ್ಲಿ ಆಸಕ್ತಿ ವಹಿಸಬೇಕು. ಸಂಘಟನೆ ತುಂಬಾ ಕಷ್ಟವಾಗಿದ್ದು, ಸಾಂಸ್ಕೃತಿಕ ಸಂಘಟನೆಗೆ ಪ್ರೇಕ್ಷಕರು ಸ್ಪಂದಿಸಬೇಕು ಎಂದರು.
ಸಾಹಿತಿ ಗಂಗಾಧರ ಕೊಳಗಿ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ನಿವೃತ್ತ ಕಾರ್ಯದರ್ಶಿ ಚಂದ್ರಶೇಖರ ಹೆಬ್ಬಾರ ಉಡುಪಿ ಉಪಸ್ಥಿತರಿದ್ದರು.
ಒಡ್ಡೋಲಗ ಸಂಸ್ಥೆ ಮುಖ್ಯಸ್ಥ ಗಣಪತಿ ಬಿ.ಹಿತ್ಲಕೈ ಸ್ವಾಗತಿಸಿದರು. ಪ್ರಜ್ಞಾ ಹೆಗಡೆ, ಕೇಶವ ಹೆಗಡೆ ಕಿಬ್ಳೆ, ನವೀನ್ ಸಹಕರಿಸಿದರು.
ನಂತರ ಲವ-ಕುಶ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮದ್ದಳೆಯಲ್ಲಿ ಶಂಕರ ಭಾಗ್ವತ್ ಯಲ್ಲಾಪುರ, ಚಂಡೆಯಲ್ಲಿ ಶ್ರೀವತ್ಸ ಗುಡ್ಡೆದಿಂಬ ಸಹಕರಿಸಿದರು.
ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಮಂಜುನಾಥ ಭಟ್ಟ ಗೊರಮನೆ, ಮಹಾಬಲೇಶ್ವರ ಭಟ್ಟ ಗುಂಜಗೋಡ, ಗಣಪತಿ ಹಿತ್ಲಕೈ, ರೇಣುಕಾ ನಾಗರಾಜ ಶಿರಸಿ, ಸಂಧ್ಯಾ ಅಜಯ ಹೆಗಡೆ ಶಿರಸಿ, ಕೌಸ್ತುಭ ಆರ್.ಹೆಗಡೆ ಅಳಗೋಡ, ಯಶಸ್ ನಗರ ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸಿದರು.