ಬರವಣಿಗೆಯಿಂದ ಯುವಕರ ಜೀವನ ಸುಧಾರಿಸಲಿ

sapna samvad
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಾನು ಸಾಹಿತಿಯೆಂದು ಭಾವಿಸಿಕೊಂಡಿಲ್ಲ. ನಾನೊಬ್ಬ ಬರಹಗಾರ, ಸಂವಹನಕಾರ. ನನ್ನ ಬರವಣಿಗೆಯಿಂದ ಒಂದಿಷ್ಟು ಜನರ, ಮುಖ್ಯವಾಗಿ ಯುವಕರ ಜೀವನ ಸುಧಾರಣೆಯಾಗಲಿ ಎಂಬ ಆಶಯದೊಂದಿಗೆ ಬರೆಯುತ್ತಿದ್ದೇನೆ ಎಂದು ನಿವೃತ್ತ ಡಿಜಿಪಿ ಡಿ.ವಿ. ಗುರುಪ್ರಸಾದ ಹೇಳಿದರು.

ಹುಬ್ಬಳ್ಳಿಯ ಸಪ್ನ ಬುಕ್ ಹೌಸ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಮಾತು ಮಂಥನ-ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ನಾನು ಬರೆಯುತ್ತಿದ್ದೇನೆ. ಸಪ್ನ ಬುಕ್ ಹೌಸ್​ನಿಂದಲೇ 25 ಪುಸ್ತಕಗಳು ಪ್ರಕಟವಾಗಿದೆ. ನಾಲ್ಕೂವರೆ ವರ್ಷಗಳ ಸಂಶೋಧನೆ ಬಳಿಕ ಇತ್ತೀಚೆಗೆ ‘ಪಾಕಿಸ್ತಾನದ ಐಎಸ್​ಐ’ ಪುಸ್ತಕವನ್ನು ಬರೆದಿದ್ದೇನೆ ಎಂದು ತಿಳಿಸಿದರು.

1948ರಲ್ಲಿ ಪಾಕಿಸ್ತಾನದಲ್ಲಿ ಐಎಸ್​ಐ ಸಂಘಟನೆ ಹುಟ್ಟಿಕೊಂಡಿತ್ತು. ಅವರ ಕುತಂತ್ರವೇ ಕಾರ್ಗಿಲ್ ಯುದ್ಧ. 1968ರಲ್ಲಿ ಭಾರತದಲ್ಲಿ ಸ್ಥಾಪನೆಯಾದ ರಾ (ಆರ್​ಎಡಬ್ಲ್ಯು) ಸಂಸ್ಥೆಯ ಚಾಣಕ್ಯತನದಿಂದ, ಗುಪ್ತಚರ ಮಾಹಿತಿಯಿಂದ ಭಾರತ ಕಾರ್ಗಿಲ್​ನಲ್ಲಿ ಐಎಸ್​ಐ ಕುತಂತ್ರವನ್ನು ಹಿಮ್ಮೆಟ್ಟಿಸಿತು. ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಕು ಎಂಬುದು ಪಾಕಿಸ್ತಾನದ ಐಎಸ್​ಐ ಸಂಘಟನೆಯ ಏಕೈಕ ಉದ್ದೇಶವಾಗಿದೆ. ಈ ಕುರಿತು ‘ಪಾಕಿಸ್ತಾನದ ಐಎಸ್​ಐ’ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದೇನೆ ಎಂದು ಹೇಳಿದರು.

ಕಾಶ್ಮೀರದಲ್ಲಿರುವ ಮುಸ್ಲಿಮ್ೆಲ್ಲರೂ ಪಾಕಿಸ್ತಾನದ ಪರವಾಗಿದ್ದಾರೆ ಎಂದು ಐಎಸ್​ಐ ಸಂಘಟನೆ ಭಾವಿಸಿದೆ. ಇದು ತಪ್ಪು ಅಭಿಪ್ರಾಯ. ಕಾಶ್ಮೀರದ ಬಹುತೇಕ ಮುಸ್ಲಿಮ್ು ಪಾಕಿಸ್ತಾನವನ್ನು ದ್ವೇಷಿಸುತ್ತಾರೆ. ಈ ಒಂದು ಕಾರಣಕ್ಕೆ ಜಮ್ಮು-ಕಾಶ್ಮೀರ ಇಂದಿಗೂ ಭಾರತದ ಭಾಗವಾಗಿ ಉಳಿದಿದೆ. ಪಾಕಿಸ್ತಾನ ಆರ್ಥಿಕವಾಗಿ ಹಿಂದುಳಿದ ದೇಶ. ಬೇರೆ ದೇಶಗಳ ಆರ್ಥಿಕ ನೆರವಿನಿಂದ ಉಸಿರಾಡುತ್ತಿದೆ. ಅದು ಪರಾವಲಂಬಿ ರಾಷ್ಟ್ರ ಎಂದರು.

ಪುಸ್ತಕ ಪ್ರೇಮಿಗಳಾಗಿ:

ಹು-ಧಾ ಡಿಸಿಪಿ ರವೀಶ ಸಿ.ಆರ್. ಮಾತನಾಡಿ, ಪುಸ್ತಕಗಳನ್ನು ಓದುವುದರಿಂದ ನಮ್ಮ ಸುತ್ತಮುತ್ತ ಏನು ನಡೆಯುತ್ತದೆ ಎಂಬುದು ತಿಳಿಯುತ್ತದೆ. ಸಮಾಜ ಮತ್ತು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಲು ಪುಸ್ತಕ ಪ್ರೇಮಿಗಳಾಗಬೇಕು. ಡಿ.ವಿ. ಗುರುಪ್ರಸಾದ ಅವರು ಸಿಒಡಿ, ಗುಪ್ತಚರ, ಇನ್ನಿತರ ವಿಭಾಗಗಳಲ್ಲಿ ಹಲವು ಅತ್ಯುತ್ತಮ ಕೆಲಸಗಳನ್ನು ಮಾಡಿದ್ದರು. ಕಿರಿಯರಿಗೆ ಪ್ರೋತ್ಸಾಹ ನೀಡುವ ಅವರ ಮನಸ್ಥಿತಿಯನ್ನು ನಾನು ಬಲ್ಲೆ ಎಂದು ಹೇಳಿದರು.

ಸಪ್ನ ಬುಕ್ ಹೌಸ್​ನ ಹುಬ್ಬಳ್ಳಿ ಶಾಖೆ ಮುಖ್ಯಸ್ಥ ರಘು ಎಂ.ಬಿ. ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net