ಕಾರ್ಮಿಕರು ಸುರಕ್ಷಾ ಸಾಧನೆ ಬಳಸಿ ಕೆಲಸ ಮಾಡಲಿ

18-pnp 1
Published on

ಪಾಂಡವಪುರ : ಕಾರ್ಮಿಕರು ಒತ್ತಡದಲ್ಲಿ ಕೆಲಸ ಮಾಡುವಾಗ ಅನೇಕ ಅನಾಹುತಗಳು ಸಂಭವಿಸಬಹುದು. ಹೀಗಾಗಿ ಅಗತ್ಯ ಸುರಕ್ಷಾ ಸಾಧನಗಳನ್ನು ಬಳಸಿಕೊಂಡು ಕೆಲಸ ಮಾಡಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಸುಭಾಷ್ ಸಲಹೆ ನೀಡಿದರು.


ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಪ್ರಭೂಧಿತ ಸರ್ವೀಸಸ್ ಇಂಡಿಯಾ ಮೈಸೂರು ವತಿಯಿಂದ ಬುಧವಾರ ಆಯೋಜಿಸಿದ್ದ ಕಟ್ಟಡ ಕಾರ್ಮಿಕರಿಗೆ ಪೂರ್ವ ಕಲಿಕಾ ತರಬೇತಿ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು.


ಕಟ್ಟಡ ಕಾರ್ಮಿಕರು ತಲೆಗೆ ಹೆಲ್ಮೆಟ್, ಕಾಲಿಗೆ ಬೂಟ್, ಗ್ಲೌಸ್, ಮಾಸ್ಕ್, ಕನ್ನಡಕ ಹಾಗೂ ಎತ್ತರದಲ್ಲಿ ನಿಂತು ಕೆಲಸ ಮಾಡುವಾಗ ಸುರಕ್ಷಿತ ಬೆಲ್ಟ್‌ಗಳನ್ನು ಧರಿಸಿಕೊಂಡೇ ಕೆಲಸ ಮಾಡಬೇಕು. ಇದರಿಂದ ಆಕಸ್ಮಿಕವಾಗಿ ಸಂಭವಿಸಬಹುದಾದದ ಅನಾಹುತಗಳಿಂದ ರಕ್ಷಣೆ ಪಡೆಯಬಹುದು. ಸಣ್ಣಪುಟ್ಟ ಸಮಸ್ಯೆಯಾದರೂ ದುಡಿಯುವ ಕೈಗೆ ಕೆಲಸವಿಲ್ಲದೆ ಕುಟುಂಬದ ಸದಸ್ಯರು ಬೀದಿ ಪಾಲಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಲಸ ಮಾಡುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೆಲಸದ ವೇಳೆ ಮದ್ಯಪಾನ ಮಾಡುವುದು, ಬೀಡಿ, ಸಿಗರೇಟ್ ಸೇದುವುದು, ಗುಟ್ಕಗಳನ್ನು ಬಳಸುವುದನ್ನು ಮಾಡಬಾರದು. ಕೆಲವೊಮ್ಮೆ ಈ ದುಶ್ಚಟಗಳಿಂದ ತಲೆ ಸುತ್ತು ಬಂದು ಅಪಾಯ ಸಂಭವಿಸಬಹುದಾಗಿದೆ. ಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.


ಪ್ರಭೂಧಿತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶರತ್ ಮಾತನಾಡಿ, ಮನುಷ್ಯನ ದೇಹ ಇತರೆ ಎಲ್ಲ ಪ್ರಾಣಿಗಳಿಗಿಂತ ದುರ್ಬಲವಾಗಿರುತ್ತದೆ. ಆದರೆ ಪ್ರಾಣಿಗಳಿಗಿಂತ ಬುದ್ಧಿ ಹೆಚ್ಚಿರುತ್ತದೆ. ಮನುಷ್ಯನ ಚರ್ಮವು ಪ್ರಾಣಿಗಳ ಚರ್ಮಕ್ಕಿಂತ ತೆಳುವಾಗಿರುತ್ತದೆ. ಕೆಲಸದ ಮಾಡುವ ಸಂದರ್ಭದಲ್ಲಿ ಕಾಲಿಗೆ ಒಂದು ಮೊಳೆ ಚುಚ್ಚಿದರೂ ದೊಡ್ಡ ಗಾಯವಾಗಿ ಕೆಲಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಿಸುತ್ತದೆ ಎಂದರು.


ಮೊಬೈಲ್ ಫೋನ್ ಕೆಳಗೆ ಬಿದ್ದು ಒಡೆಯಬಾರದು ಎಂದು ಸೇಫ್ಟಿ ಕವರ್ ಹಾಕಿಸುತ್ತೇವೆ. ಆದರೆ ತಲೆಗೆ ಹೆಲ್ಮೇಟ್ ಧರಿಸಲ್ಲ. ಕಾರ್ಮಿಕರು ಅಗತ್ಯ ಸುರಕ್ಷತೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ತರಬೇತಿ ಶಿಬಿರದಲ್ಲಿ ಕಾರ್ಮಿಕರಿಗೆ ಕಾಮಗಾರಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ತೇರ್ಗಡೆಯಾದ ಕಾರ್ಮಿಕರಿಗೆ ಸರ್ಕಾರ ಕಟ್ಟಡ ನಿರ್ಮಾಣ ಸಾಮಗ್ರಿ ಕಿಟ್ ಅನ್ನು ಉಚಿತವಾಗಿ ನೀಡಲಿದೆ ಎಂದು ಹೇಳಿದರು.
ಈ ವೇಳೆ ಕಾರ್ಮಿಕ ನಿರೀಕ್ಷಕರಾದ ಅಮರಾವತಿ, ಗಂಗಾಧರ್, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಶಾಂತ್, ನಿರ್ದೇಶಕ ಶಾಂತರಾಜು, ಕಾರ್ಮಿಕ ಇಲಾಖೆಯ ರೂಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net