ಮಹನೀಯರ ಕನಸು ನನಸಾಗಲಿ

Let women's dreams come true
ಇಂಡಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಶಾಸಕ ಯಶವಂತರಾಯಗೌಡ ಪಾಟೀಲ, ಎಸಿ ಅಬೀದ್ ಗದ್ಯಾಳ, ತಹಸೀಲ್ದಾರ್ ಬಿ.ಎಸ್. ಕಡಕಬಾವಿ ಇತರರಿದ್ದರು.
Published on

ಇಂಡಿ: ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವಜನತೆ ಡಾ.ಅಂಬೇಡ್ಕರ್ ಹಾಗೂ ಗಾಂಧೀಜಿ ಅವರ ಕನಸಿನಂತೆ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಿದರೆ ಮಾತ್ರ ಭಾರತ ಶಕ್ತಿಶಾಲಿ ಮತ್ತು ಸರ್ವ ಶಕ್ತ, ಸಶಕ್ತ ಶ್ರೇಷ್ಠ ಭಾರತವಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರೃ ದೊರೆತಾಗಿನಿಂದ ಇಲ್ಲಿಯವರೆಗೆ ದೇಶ ನಡೆದು ಬಂದ ದಾರಿ ಹಾಗೂ ಸದ್ಯ ಅಭಿವೃದ್ಧಿ ಹೊಂದಿದ ದೇಶದ ಕಲ್ಪನೆಯನ್ನು ಅವಲೋಕಿಸಿದಾಗ ಹೆಮ್ಮೆ ಎನಿಸುತ್ತದೆ. ಸ್ವಾವಲಂಬಿ ಅರ್ಥಿಕತೆಯನ್ನು ನಿರ್ಮಿಸುವತ್ತ ಪ್ರಾಥಮಿಕ ಗಮನ ಹರಿಸಿದ್ದ ಭಾರತ ಸದ್ಯ ತಂತ್ರಜ್ಞಾನ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಜಾಗತಿಕ ನಾಯಕನಾಗಿ ಮಾರ್ಪಟ್ಟಿರುವುದು ಶ್ಲಾಘನೀಯ ಎಂದರು.

ಕಂದಾಯ ಎಸಿ ಅಬೀದ್ ಗದ್ಯಾಳ ಮಾತನಾಡಿ, ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಭಾವೈಕ್ಯ ನಮ್ಮ ದೊಡ್ಡ ಶಕ್ತಿಯಾಗಿದೆ. ಹಿರಿಯರ ತ್ಯಾಗ ಬಲಿದಾನದಿಂದ ದೊರೆತ ಸ್ವಾತಂತ್ರೃ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ತಹಸೀಲ್ದಾರ್ ಬಿ.ಎಸ್. ಕಡಕಬಾವಿ, ಶಿಕ್ಷಕ ಬಸವರಾಜ ಗೋರನಾಳ ಮಾತನಾಡಿದರು. ಡಿವೈಎಸ್‌ಪಿ ಜಗದೀಶ ಎಚ್.ಎಸ್., ಇಒ ಗುರುಶಾಂತ ಬಳುಂಡಗಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್. ಅಲಗೂರ ಮತ್ತಿತರರಿದ್ದರು.

ಲಚ್ಯಾಣ ಗ್ರಾಮದ ಕೊಳವೆ ಬಾವಿಯಲ್ಲಿ ಬಿದ್ದ ಸಾತ್ವಿಕ ಮುಜಗೊಂಡನನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಇಲಾಖೆಯ ಟಿಎಚ್‌ಒ ಅರ್ಚನಾ ಕುಲಕರ್ಣಿ, ಸರ್ಕಾರಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ.ವಿಪುಲ್ ಕೋಳೇಕರ, ಡಾ.ಚೈತ್ರಾ ಭಜಂತ್ರಿ, ಶಾಂತಾಬಾಯಿ ಶಹಾಪುರ, ಎಂ.ಎ್.ದರ್ಗಾ ಅವರನ್ನು ಸನ್ಮಾನಿಸಲಾಯಿತು.

ಕಂದಾಯ ಇಲಾಖೆಯ ಎಚ್.ಎಸ್. ಗುನ್ನಾಪುರ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಅವಜಿ, ಪೊಲೀಸ್ ಇಲಾಖೆಯ ಎಸ್.ಎಂ. ಬಗಲಿ, ಎಂ.ಐ. ಮಠಪತಿ, ಎಸ್.ವೈ. ಜೆರುಟಗಿ, ಆರ್.ಎಸ್. ಪಡಗಾನೂರ, ವಿ.ಜಿ. ಪರಮಗೊಂಡ ಅವರನ್ನು ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಉರ್ದು ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಹಾಗೂ ಪಿಯು ಪರೀಕ್ಷೆಯಲ್ಲಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಂಡಿ ತಾಲೂಕಿನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾತಲಗಾಂವ ಸರ್ಕಾರಿ ಪ್ರಾಢಶಾಲೆಯ ವಿಜಯಲಕ್ಷ್ಮೀ ಆಲಮೇಲ ವಿದ್ಯಾರ್ಥಿನಿಗೆ ಇಂಡಿಯ ಶಾಂತೇಶ್ವರ ಶಾಲೆಯಲ್ಲಿ 1989 ರಲ್ಲಿ ಕಲಿತ ಗೆಳೆಯರ ಬಳಗದ ವತಿಯಿಂದ ಸುರೇಶ ಕೋಳೆಕರ ಗುರುಗಳ ಸ್ಮರಣಾರ್ಥ ಹತ್ತು ಸಾವಿರ ರೂ. ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಎಸಿ ಅಬೀದ್ ಗದ್ಯಾಳ ಅವರಿಗೆ ಪೊಲೀಸ್, ಹೋಮ್‌ಗಾರ್ಡ್, ಎನ್.ಸಿ.ಸಿ ಮತ್ತು ವಿವಿಧ ಶಾಲೆಯ ತಂಡದಿಂದ ಗೌರವ ವಂದನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net