ಸ್ತ್ರೀಯರು ನ್ಯಾಯ ಬದ್ಧ ಅವಕಾಶ ಬಳಸಿಕೊಳ್ಳಲಿ

Kanunu arivu
Published on

ಬ್ಯಾಡಗಿ: ಸಮಾಜದಲ್ಲಿ ಹಲವು ಬದಲಾವಣೆ ಬಳಿಕ ಸ್ತ್ರೀಯರು ಸಮಾನತೆಯಿಂದ ಜೀವಿಸುವಂತಾಗಿದೆ. ಸಂಬಂಧಿಸಿದ ಇಲಾಖೆಗಳು ಕಾಯ್ದೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅಮೋಲ್ ಹಿರಿಕುಡೆ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಕಂದಾಯ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪುರುಷ ಪ್ರಧಾನ ಸಮಾಜವು ಮಹಿಳಾ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತ ಬಂದಿದೆ. ಮಹಿಳೆಗೆ ಶಿಕ್ಷಣ, ಸಾಮಾಜಿಕ, ಆರ್ಥಿಕ ಸ್ವಾತಂತ್ರೃ ಜೀವನದ ಭದ್ರತೆ ಕೊಡಿಸಲು ಶತಮಾನಗಳಿಂದಲೂ ಹೋರಾಟಗಳು ನಡೆದಿವೆ. ಅಸಮಾನತೆ ತಾಂಡವವಾಡುತ್ತಿದ್ದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು, ಕಾಯ್ದೆಗಳ ಮಾಹಿತಿ ನೀಡುವಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆದಿವೆ. ರಾಜ್ಯ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಗಳು ಕಾರ್ಯನಿರ್ವಹಿಸುತ್ತಿದ್ದು, ಸಂಕಷ್ಟದಲ್ಲಿ ಸಿಲುಕಿರುವ ಕುಟುಂಬಗಳು, ಮಹಿಳೆಯರು ತಮಗಿರುವ ನ್ಯಾಯ ಬದ್ಧ ಅವಕಾಶಗಳನ್ನು ಪಡೆದುಕೊಳ್ಳಬೇಕು. ಸಮರ್ಪಕವಾಗಿ ಕಾಯ್ದೆ ಅನುಷ್ಠಾನಗೊಂಡಾಗ ಮಾತ್ರ ನೈಜವಾಗಿ ಮಹಿಳೆಯರಿಗೆ ನ್ಯಾಯ ಸಿಗಲಿದೆ ಎಂದರು.

ಸಿವಿಲ್ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, 1990ರಲ್ಲಿ ಜಾರಿಗೊಂಡ ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆಯಲ್ಲಿ ಮಹಿಳೆಯರ ಆರ್ಥಿಕ ಸ್ಥಿತಿಗತಿ ಸೇರಿದಂತೆ ವಿವಿಧ ಸುಧಾರಣೆ ಹಾಗೂ ಸಂವಿಧಾನಾತ್ಮಕ ಕಾನೂನು, ರಕ್ಷಣೆ ನೀಡಲು ಶಿಫಾರಸು ಮಾಡಲಾಗಿದೆ. ಮಹಿಳಾ ಸಬಲೀಕರಣಕ್ಕೆ ತೊಡಕಾಗಿದ್ದ ಬಾಲ್ಯವಿವಾಹ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕಠಿಣ ಶಿಕ್ಷೆಗಳನ್ನು ಪ್ರಕಟಿಸಿದೆ. ಉದ್ಯೋಗಕ್ಕಾಗಿ ಕಡ್ಡಾಯ ಶಿಕ್ಷಣ ಸೇರಿದಂತೆ ಮಹಿಳಾ ಮೀಸಲಾತಿ ಸೌಲಭ್ಯಗಳು ಜಾರಿಗೊಂಡಿವೆ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್. ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಫಿರೋಜ್‌ಷಾ ಸೋಮನಕಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಶೇಖರ ಎಂ., ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ.ಜಿ. ಹಿರೇಮಠ, ವಕೀಲರಾದ ಎಂ.ಪಿ. ಹಂಜಗಿ, ಎನ್.ಬಿ. ಬಳಿಗಾರ, ಭಾರತಿ ಕುಲಕರ್ಣಿ, ಎಂ.ಎಸ್. ಕೊಪ್ಪದ, ಎಸ್.ಎಚ್. ಗುಂಡಪ್ಪನವರ, ಯಶೋಧರ ಅರ್ಕಾಚಾರಿ, ಎಸ್.ಎಚ್. ಕಾಟೇನಹಳ್ಳಿ, ಎಸ್.ಎಸ್. ಕೊಣ್ಣೂರು, ಎಸ್.ಎಸ್. ಮುಡೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net