

ಮುಂಡರಗಿ: ಕೌಟುಂಬಿಕ ದೌರ್ಜನ್ಯಕ್ಕೊಳಪಟ್ಟ ನೊಂದ ಮಹಿಳೆಯರಿಗೆ ಮಹಿಳಾ ಸಹಾಯವಾಣಿ ಸಾಂತ್ವನ ಕೇಂದ್ರದಲ್ಲಿ ಶೀಘ್ರ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡಲಾಗುತ್ತದೆ. ಮಹಿಳೆಯು ಸಮಾಜದಲ್ಲಿ ಉನ್ನತ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಮಹಿಳಾ ಸಹಾಯವಾಣಿ ಸಾಂತ್ವನ ಕೇಂದ್ರದ ಮುಖ್ಯಸ್ಥೆ ನೀಲಮ್ಮ ಕೋರಿ ಹೇಳಿದರು.
ಪಟ್ಟಣದಲ್ಲಿ ಶ್ರೇಯಸ್ ಸಂಸ್ಥೆ (ರಿ) ಮಹಿಳಾ ಸಾಂತ್ವನ ಸಹಾಯವಾಣಿ ಹಾಗೂ ಶ್ರೀ ಯಲ್ಲಮ್ಮ ದೇವಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವಿಶ್ವ ಕನ್ನಡ ರಕ್ಷಣಾ ವೇದಿಕೆ ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ರಾಜೇಶ್ವರಿ ಪಾಟೀಲ, ಮಧುಮತಿ ಮಡಿವಾಳರ ಮಾತನಾಡಿ, ಆಧುನಿಕ ಯುಗದಲ್ಲಿ ಮಹಿಳೆಯರು ಸ್ವಾವಲಂಬನೆಯಿಂದ ಬದುಕುವುದು ಮತ್ತು ಸಾಮಾಜಿಕ, ಆರ್ಥಿಕ, ರಾಜಕೀಯ ಇತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ತಿಪ್ಪಣ್ಣ ಉಂಡಿ ಅಧ್ಯಕ್ಷತೆ ವಹಿಸಿದ್ದರು. ಮಂಜುಳಾ ಕುರಿ, ಜಯಲಕ್ಷ್ಮೀ ಹುಯಿಲಗೋಳ, ವಸತಿ ನಿಲಯದ ಸಿಬ್ಬಂದಿ, ಮಕ್ಕಳು ಉಪಸ್ಥಿತರಿದ್ದರು.