ಮನೋಸ್ವಾಸ್ಥ್ಯದತ್ತ ಮಹಿಳೆಯರು ಕಾಳಜಿ ವಹಿಸಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯ

prsdt prgm
Published on

ಬೆಂಗಳೂರು: ಪ್ರಸ್ತುತ ಬಹುವಿಧ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಮಹಿಳೆಯರು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದ್ದು, ಮಾನಿನಿಯರ ಅರ್ಥಪೂರ್ಣ ಜೀವನಕ್ಕಾಗಿ ಮಾನಸಿಕ ಸ್ವಾಸ್ಥ್ಯವು ಮೂಲಭೂತ ಅಂಶವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಯಪಟ್ಟಿದ್ದಾರೆ.

ನಗರದ ಆರ್ಟ್ ಆಫ್​ ಲಿವಿಂಗ್ ಆಶ್ರಮದಲ್ಲಿ ಆಯೋಜಿಸಿರುವ 3 ದಿನಗಳ ಜಾಗತಿಕ ಮಹಿಳಾ ಸಮ್ಮೇಳನ ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು.

ಇಂದಿನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ ವಿಚಾರದಲ್ಲಿ ಎಲ್ಲ ವಯೋಮಾನದವರೂ ಸವಾಲು ಎದುರಿಸುತ್ತಿದ್ದಾರೆ. ಅದರಲ್ಲೂ ಮಹಿಳೆಯರಲ್ಲಿ ವೃತ್ತಿಪರವಾಗಿ ಸ್ಪರ್ಧಿಸುವುದು, ಸಾಮಾಜಿಕ ನಿರೀಕ್ಷೆ ಪೂರೈಸುವುದು ಹಾಗೂ ವೈಯಕ್ತಿಕ ನಿರೀಕ್ಷೆ ಪೂರೈಸುವುದು ಸೇರಿ ವಿವಿಧ ಸವಾಲುಗಳನ್ನು ನಿಭಾಯಿಸುವ ಕವಲುಹಾದಿಯಲ್ಲಿದ್ದಾರೆ. ಕೆಲವೊಮ್ಮೆ, ಸಮಾಜದ ಸಾಂಸ್ಕೃತಿಕ ನಿಯಮಗಳು ಮಹಿಳೆಯರಿಗೆ ತಮ್ಮ ಭಾವನಾತ್ಮಕ ಯೋಗಕ್ಷೇಮದ ಬಗ್ಗೆ ಮುಕ್ತವಾಗಿ ಮಾತನಾಡಲು ಕಷ್ಟವಾಗುತ್ತದೆ. ಹಾಗಾಗಿ ಮಾನಸಿಕ ಆರೋಗ್ಯ ಕಾಳಜಿ ವಹಿಸುವುದು ಬಹುಮುಖ್ಯ ಎಂದು ಪ್ರತಿಪಾದಿಸಿದರು.

ಮತ್ತಷ್ಟು ಮಹಿಳಾ ಸಬಲೀಕರಣ ಅಗತ್ಯ:

ಮಹಿಳೆಯೊಬ್ಬಳು ಅರ್ಥಪೂರ್ಣ ಜೀವನ ನಡೆಸಲು ಹಾಗೂ ಕುಟುಂಬ, ಸಮಾಜಕ್ಕೆ ಕೊಡುಗೆ ನೀಡುವ ಸಾಮರ್ಥ್ಯಕ್ಕೆ ಮಾನಸಿಕ ಸ್ವಾಸ್ಥ್ಯ ಮೂಲಭೂತವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು. ಭಾರತದ ನಾರಿ ಶಕ್ತಿಯು ಆಕಾಂಕ್ಷೆ, ಸಾಧನೆ ಹಾಗೂ ಕೊಡುಗೆ ನೀಡುವಲ್ಲಿ ಶ್ರಮಿಸುತ್ತಿರುವುದು ಹೆಮ್ಮೆ ಸಂಗತಿ. ವಿಜ್ಞಾನ, ಕ್ರೀಡೆ, ರಾಜಕೀಯ, ಸಂಸ್ಕೃತಿ ಕ್ಷೇತ್ರಗಗಳಲ್ಲಿ ನಮ್ಮ ಸಹೋದರಿಯರು ತಲೆ ಎತ್ತಿಕೊಂಡು ಮುನ್ನಡೆಯುತ್ತಿದ್ದಾರೆ. ಮಹಿಳಾ ಸಬಲೀಕರಣ ವಿಚಾರದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಅವಶ್ಯಕತೆ ಇದೆ ಎಂದು ರಾಷ್ಟ್ರಪತಿಯವರು ವಿವರಿಸಿದರು.

ಆರ್ಟ್ ಆಫ್​ ಲಿವಿಂಗ್ ಸಂಸ್ಥೆಯು ಯೋಗ, ಆಯುರ್ವೇದ ಸೇರಿ ಅಧ್ಯಾತ್ಮ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಸಾವಿರಕ್ಕೂ ಹೆಚ್ಚು ಉಚಿತ ಶಾಲೆಗಳನ್ನು ತೆರೆದು ಶಿಕ್ಷಣ ರಂಗದಲ್ಲಿ ಸಮಾಜಮುಖಿ ಕಾರ್ಯದಲ್ಲಿ ಮಗ್ನವಾಗಿದ್ದು, ಈ ಕೆಲಸವನ್ನು ಮುಂದುವರಿಸಬೇಕು ಎಂದು ರಾಷ್ಟ್ರಪತಿಯವರು ಆಶಿಸಿದರು.

ನಾರಿಶಕ್ತಿಯಿಂದ ಬಹುಮುಖ ಪಾತ್ರ:

ಅಧ್ಯಾತ್ಮ ಗುರು ಶ್ರೀ ರವಿಶಂಕರ್ ಗುರೂಜಿ ಮಾತನಾಡಿ, ಮಹಿಳೆಯರ ಭಾವನೆಗಳನ್ನು ಮಾನ್ಯ ಮಾಡುವುದು ನಾಗರಿಕ ಸಮಾಜದ ಕರ್ತವ್ಯ. ಆಕೆ ದೇಶವನ್ನು ಮುನ್ನಡೆಸುವ ಶಕ್ತಿ, ಸಾಮರ್ಥ್ಯವನ್ನು ಹೊಂದಿದ್ದಾಳೆ. ಮಹಿಳೆ ದುಃಖಿಯಾದಲ್ಲಿ ದೇಶಕ್ಕೆ ಶೋಭೆ ತರದು. ಹಾಗಾಗಿ ಮಾನಿನಿಯರಲ್ಲಿ ಒಂದು ಹನಿ ಕಣ್ಣೀರು ಬಾರದಂತೆ ನೋಡಿಕೊಳ್ಳಬೇಕಿದೆ ಎಂದರು.

ಪ್ರಸ್ತುತ ನಗರ ಹಾಗೂ ಗ್ರಾಮೀಣ ಮಹಿಳೆಯರಲ್ಲಿ ಭಾರೀ ಅಂತರ ಇದೆ. ಇದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮಹಿಳಾ ಸಬಲೀಕರಣ ಕಾರ್ಯವನ್ನು ಸಮರ್ಥವಾಗಿ ಕೈಗೊಳ್ಳಬೇಕು. ಭಾರತದಲ್ಲಿ ನಾರಿ ಶಕ್ತಿ ದುರ್ಗಾ, ಲಕ್ಷ್ಮೀ ಹಾಗೂ ಸರಸ್ವತಿ ದೇವರ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪರಂಪರೆ ಮುನ್ನಡೆದುಕೊಂಡು ಹೋಗಲು ಆಧ್ಯಾತ್ಮಿಕತೆ ನೆರವಿಗೆ ಬರಲಿದೆ. ಮಾನವ ಕುಲಕ್ಕೆ ಒಳಿತು ಮಾಡಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಗುರೂಜಿ ವಿವರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಕೇಂದ್ರ ಸಚಿವೆಯರಾದ ಶೋಭಾ ಕರಂದ್ಲಾಜೆ, ಅನ್ನಪೂರ್ಣಾ ದೇವಿ, ಸಂಸದೆ ಹೇಮಾಮಾಲಿನಿ, ಅಧ್ಯಾತ್ಮ ಗುರು ಶ್ರೀ ರವಿಶಂಕರ್ ಗುರೂಜಿ, ಸಮಾವೇಶದ ಸಂಚಾಲಕಿ ಭಾನುಮತಿ ನರಸಿಂಹನ್ ಹಾಜರಿದ್ದರು.

ಆಟ್ ಆಫ್​ ಲಿವಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ನಮ್ಮ ಮಕ್ಕಳ ಶಿಕ್ಷಣಕ್ಕಿಂತ ಮಾನವೀಯತೆಯಲ್ಲಿ ಹೆಚ್ಚಿನ ಹೂಡಿಕೆ ಬೇರೊಂದಿಲ್ಲ. ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಹಾಗೂ ಬೆಂಬಲದೊಂದಿಗೆ ಅನೇಕ ಮಕ್ಕಳು ದೇಶದ ಅಭಿವೃದ್ಧಿ ಪಯಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿ.

- ದ್ರೌಪದಿ ಮುರ್ಮು, ರಾಷ್ಟ್ರಪತಿ

ಪ್ರಶಸ್ತಿ ಪುರಸ್ಕೃತರ ವಿವರ:

ವಿಶಾಲಾಕ್ಷಿ ಪ್ರಶಸ್ತಿ: ಅನ್ನಪೂರ್ಣಾ ದೇವಿ - ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ವಿಭಾಗ, ಹೇಮಾಮಾಲಿನಿ - ಸಿನಿಮಾ/ಸಾರ್ವಜನಿಕ ಸೇವೆ, ಪ್ಯಾಟ್ರಿಷಿಯಾ ಸ್ಕಾಟ್‌ಲ್ಯಾಂಡ್ - ಸಾಮಾಜಿಕ ನ್ಯಾಯ, ಅಮ್ಲಾ ರೂಯಾ - ಗ್ರಾಮೀಣ ಅಭಿವೃದ್ಧಿ, ಡಾ. ಭಾಗ್ಯಶ್ರೀ ಪ್ರಸಾದ್ ಪಾಟೀಲ್ - ಕೃಷಿ ಸಂಶೋಧನೆ, ಸುಮಲತಾ ಅಂಬರೀಶ್ - ಸಾರ್ವಜನಿಕ ಸೇವೆ, ಕೇಥರಿನ್ ವಿಂಟರ್ ಸೆಲ್ಲೇರಿ - ಸೂಕ್ಷ್ಮ ಪೋಷಣಾ ನಿಲುವಿಗಾಗಿ, ಆರ್. ಪದ್ಮಾವತಿ - ಭಾರತದ ಶಿಲ್ಪಕಲೆ ಸಂರಕ್ಷಣೆ, ಸಂಗೀತಾ ಜಿಂದಾಲ್ - ಭಾರತೀಯ ಸಂಸ್ಕೃತಿಯ ಸಂರಕ್ಷಣೆ, ಸ್ಮಿತಾ ಪ್ರಕಾಶ್ - ಪತ್ರಿಕೋದ್ಯಮ.

ಆಚಾರ್ಯ ರತ್ನಾನಂದ ಪ್ರಶಸ್ತಿ: ಲೆಫ್ಟಿನೆಂಟ್ ಕರ್ನಲ್ ಅನಿಶ್ ಮೋಹನ್ - ಶೌರ್ಯ ಮತ್ತು ಸೇವಾ ದೃಷ್ಟಿಕೋನ, ಅರ್ನಬ್ ಗೊಸ್ವಾಮಿ - ಪತ್ರಿಕೋದ್ಯಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net