ಹೆಣ್ಣು ತನ್ನನ್ನು ತಾನು ಶಕ್ತಳೆಂದು ನಿರೂಪಿಸಿಕೊಳ್ಳಲಿ: ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್

12
Published on

ಮೈಸೂರು: ಹೆಣ್ಣು ತನ್ನನ್ನು ತಾನು ಎಲ್ಲ ಕ್ಷೇತ್ರದಲ್ಲೂ ನಿರೂಪಿಸಿಕೊಳ್ಳುವ ಅವಶ್ಯಕತೆ ಇದ್ದು, ಸವಾಲುಗಳು ಹೆಚ್ಚಿದೆ. ಆದರೆ ಹೆಣ್ಣು ಈ ಸವಾಲುಗಳನ್ನು ಎದುರಿಸಲು ಹಿಂಜರಿಕೆ ಬಿಟ್ಟು ತಮ್ಮನ್ನು ತಾವು ನಿರೂಪಿಸಿಕೊಳ್ಳಬೇಕು ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹೇಳಿದರು.

ನಗರದ ಪೊಲೀಸ್ ತರಬೇತಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಮಹಿಳಾ ಸಶಕ್ತಿಕರಣ ಕುರಿತ ಕಾರ್ಯಾಗಾರದಲ್ಲಿ ಪ್ರೇರಕ ಶಕ್ತಿಯಾಗಿ ಮಹಿಳೆ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ನಾವು ಶಿಸ್ತು ಬೆಳೆಸಿಕೊಳ್ಳಬೇಕು. ಎಲ್ಲವನ್ನು ಮೀರಿ ಹಿಂಜರಿಕೆಯನ್ನು ಬಿಟ್ಟು ಕೆಲಸ ನಿಭಾಯಿಸಬಲ್ಲೆವು ಎನ್ನುವ ಮನೋಭಾವ ತಾಳಬೇಕು. ಯಾವುದೇ ಕಾರ್ಯವನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಎನ್. ಮಮತಾ ಮಾತನಾಡಿ, ಮಹಿಳೆಯರು ವೃತ್ತಿ ಮತ್ತು ಕುಟುಂಬದ ಸವಾಲುಗಳನ್ನು ನಿಭಾಯಿಸಬೇಕು ಎಂದರು.

ಇಂದಿನ ಆಧುನಿಕ ದಿನಗಳಲ್ಲಿ ಮಹಿಳೆ ಮನೆಯೊಳಗೆ ಹಾಗೂ ಹೊರಗೂ ದುಡಿಯಬೇಕಿದೆ. ಈ ನಿಟ್ಟಿನಲ್ಲಿ ಮಹಿಳೆ ಈ ಎರಡನ್ನು ಸಮಾನ ಮನಸ್ಸಿನಿಂದ ಸಶಕ್ತಿಯಿಂದ ಎದುರಿಸಿ ಮಾದರಿ ಸಮಾಜವನ್ನು ಕಟ್ಟುವಂತ ದಾಪುಗಾಲು ಹಾಕಬೇಕಾಗಿದೆ ಎಂದು ಹೇಳಿದರು.

ಪೊಲೀಸ್ ಅಕಾಡೆಮಿಯ ಪ್ರಾಂಶುಪಾಲೆ ಎಂ.ಎಸ್.ಗೀತಾ ಪ್ರಸನ್ನ ಮಾತನಾಡಿ, ಇಂದು ಹೆಣ್ಣಿನ ಮುಂದಿರುವ ಸವಾಲುಗಳ ಬಗ್ಗೆ ವಿವರಿಸಿದರು.

ಸೆಸ್ಕ್ ಜಾಗೃತದಳದ ಪೊಲೀಸ್ ಅಧೀಕ್ಷಕಿ ಸವಿತಾ ಹೂಗಾರ, ಪೊಲೀಸ್ ತರಬೇತಿ ಶಾಲೆಯ ವೈದ್ಯಾಧಿಕಾರಿ ಡಾ.ಎಸ್.ಡಿ. ಕಲಾವತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net