ಮಹಿಳೆಯರು ಕಾನೂನಿನ ಬಗ್ಗೆ ತಿಳಿದುಕೊಳ್ಳಲಿ

16blrp3
Published on

ಬೇಲೂರು: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಕಾನೂನಿನಡಿ ರಕ್ಷಣೆ ಇದ್ದು, ಈ ಬಗ್ಗೆ ತಿಳಿದುಕೊಂಡು ಮುನ್ನಡೆಯಬೇಕಿದೆ ಎಂದು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಸಿ.ಪ್ರಸನ್ನಕುಮಾರ್ ಹೇಳಿದರು.

ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪಟ್ಟಣದ ಶ್ರೀ ಚನ್ನಕೆಶವಸ್ವಾಮಿ ದಾಸೋಹ ಸಭಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ, ಬಾಲ್ಯ ವಿವಾಹ ನಿರ್ಮೂಲನೆಯ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೂ ಅವರ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿರುವ ಬಗ್ಗೆ ಆರೋಪ ಕೇಳಿ ಬರುತ್ತಿವೆ. ಇದರ ನಿವಾರಣೆಗಾಗಿ ಮಹಿಳೆಯರಿಗೆ ಕಾನೂನಿನಲ್ಲಿ ರಕ್ಷಣೆ ಇದೆ. ಗಂಡನ ಮನೆಯಲ್ಲಿ ಕಿರುಕುಳ ಅನುಭವಿಸಿದ್ದೀರಿ ಎಂಬುದರ ಮೇಲೆ ಜೀವನಾಂಶ ಕೊಡಿಸುವುದಕ್ಕೆ ಅವಕಾಶವಿದೆ ಎಂದರು.

ಹೆಣ್ಣು ಮಕ್ಕಳಿಗೆ 18 ವರ್ಷ ತುಂಬದೇ ಬಾಲ್ಯ ವಿವಾಹ ಮಾಡುತ್ತಿರುವ ಪ್ರಕರಣಗಳು ಕಾಣುತ್ತಿದ್ದೇವೆ. ಇದು ಅಪರಾಧ ಎಂಬುದರ ಬಗ್ಗೆ ಜಾಗೃತಿ ಮೂಡಿಸಿ ತಡೆಗಟ್ಟಬೇಕಿದೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಿ, ಲಿಂಗ ಸಮಾನತೆ ಸಾಧಿಸಬೇಕಿದೆ. ಮಹಿಳೆಯರು ಕಾನೂನಿನ ಬಗ್ಗೆ ತಿಳಿದುಕೊಂಡು ಮುಂದೆ ಸಾಗಬೇಕಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಪೊಲೀಸ್ ವೃತ್ತ ನಿರೀಕ್ಷಕ ಜಯರಾಮ್, ವಕೀಲರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾಮಣಿ, ಶಿಕ್ಷಣ ಸಂಯೋಜಕ ಗೋಪಾಲ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net